ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ, ಅಧಿಕಾರ ನೀಡಿ

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ, ಅಧಿಕಾರ ನೀಡಿ

ಮಲೇಬೆನ್ನೂರು, ಫೆ.14- ಸರ್ಕಾರವು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ ಮತ್ತು ಅಧಿಕಾರ ಕೊಟ್ಟಾಗ ಮಾತ್ರ ನಾಲೆಗಳ ದುರಸ್ತಿ ಮತ್ತು ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ಬಸವೇಶ್ವರ ನೀರು ಬಳಕೆದಾರರ ಸಹಕಾರ ಸಂಘದ ಜಿ.ಮಂಜುನಾಥ್ ಪಟೇಲ್ ಹೇಳಿದರು.

ಭದ್ರಾ ಕಾಡಾ ವತಿಯಿಂದ ಹರಿಹರದ ನೀರಾವರಿ ಅತಿಥಿ ಗೃಹದ ಸಭಾಂಗಣದಲ್ಲಿ ಹರಿಹರ ತಾಲ್ಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಜಲಾಶಯ ಹಾಗೂ ಕಾಲುವೆಗಳ ಮತ್ತು ನೀರಿನ ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕದಲ್ಲೂ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ನೀಡಬೇಕೆಂದು ಮಂಜುನಾಥ್  ಸರ್ಕಾರವನ್ನು ಒತ್ತಾಯಿಸಿದರು.

ಭದ್ರಾ ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಡಾ. ನಾಗೇಶ್ ಎಸ್.ಡೊಂಗೆ ಮಾತನಾಡಿ, ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯ ಬಗ್ಗೆ ತಿಳಿದುಕೊಂಡು ಕೆಲಸ ಮಾಡಿದಾಗ ನಿಮ್ಮ ಭಾಗದಲ್ಲಿ ಕಾಲುವೆ ದುರಸ್ತಿ ಅಥವಾ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಪ್ರತಿ ವರ್ಷ ಸಂಘಗಳ ಆಡಿಟ್ ಮಾಡಿಸಿದರೆ ಮಾತ್ರ ಅಂತಹ ಸಂಘಗಳಿಗೆ ಮಾನ್ಯತೆ ಮತ್ತು ಅಧಿಕಾರ ಇರುತ್ತದೆ ಎಂದರು.

ಭದ್ರಾ ಕಾಡಾ ಸಹಕಾರ ಸಂಘಗಳ ಸಹಾಯ ನಿಬಂಧಕ ಎಸ್.ಇ.ಮಂಜುನಾಥ್ ಅವರು, ಸಂಘಗಳ ಬಗ್ಗೆ ತಿಳಿಸಿದರು. ಸಾರಥಿ ಸುಶೀಲಮ್ಮ, ಹಾಲಿವಾಣ ಪರಮೇಶ್ವರಪ್ಪ, ವಾಸನ ಮಂಜುನಾಥ್, ಕುಣೆಬೆಳಕೆರೆ ರುದ್ರಪ್ಪ, ಕುಂಬಳೂರು ಸದಾಶಿವ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಸತೀಶ್ ಸ್ವಾಗತಿಸಿದರು. ವೀಣಾ ವಂದಿಸಿದರು.

error: Content is protected !!