ಕೋಟಿಹಾಳ ಬೀರಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಿ.ಬಿ. ವಿನಯ್ ಕುಮಾರ್
ಹರಿಹರ, ಫೆ.14- ತಾಲ್ಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಇಂತಹ ರಸ್ತೆಯನ್ನು ದುರಸ್ತಿ ಪಡಿಸುವ ಬುದ್ಧಿಯನ್ನು ದೇವರು ಜನ ಪ್ರತಿನಿಧಿಗಳಿಗೆ ಕರುಣಿಸಲಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಉಕ್ಕಡಗಾತ್ರಿ ಗ್ರಾಮದಲ್ಲಿ ನಡೆದ ಕೋಟಿಹಾಳ ಬೀರಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜನರಿಂದ ಮತ ಪಡೆದು ಆಯ್ಕೆಯಾದ ಜನ ಪ್ರತಿನಿಧಿಗಳು ಜನರ ಸೇವೆ ಮಾಡಲು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸುವಂತೆ ಹಾಗೂ ಜನರನ್ನು ಬೆಳೆಸುವಂತೆ ದೇವರು ಅನುಗ್ರಹ ನೀಡಲಿ ಎಂದು ಹೇಳಿದರು.
ತಾಲ್ಲೂಕಿನ ಕೊನೆ ಭಾಗದ ಜನರಿಗೆ ಭದ್ರಾ ನೀರು ಸಿಗುತ್ತಿಲ್ಲ. ಇದರಿಂದ ರೈತರು ಕಷ್ಟದಲ್ಲಿದ್ದಾರೆ. ಇವರಿಗೂ ನೀರು ಸಿಕ್ಕು, ಬದುಕು ಹಸನಾಗಲಿ.
ರೈತರ ಬದುಕು ಚೆನ್ನಾಗಿರಬೇಕು. ಇದೇ ರೀತಿಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಒಗ್ಗಟ್ಟಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಈ ವೇಳೆ ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು, ಮಾಜಿ ಶಾಸಕ ಎಸ್. ರಾಮಪ್ಪ, ಇನ್ ಸೈಟ್ಸ್ ಐಎಎಸ್ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಮತ್ತಿತರರು ಹಾಜರಿದ್ದರು.