ಮೈಲಾರ ಕಾರಣಿಕ
ಹೂವಿನಹಡಗಲಿ, ಫೆ.14- ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.
`ತುಂಬಿದ ಕೊಡ ತುಳಕಿತಲೇ ಪರಾಕ್’ ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.
ದೇವಸ್ಥಾನದ ವಂಶಪಾರಂಪರ್ಯ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು.
ಈ ಹಿಂದೆ ವಿಜಯ ನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ ‘ಏಳು ಕೋಟಿ ಏಳು ಕೋಟಿಗೋ… ಚಹಾಂಗ ಬಲೋ’ ಎಂಬ ಸ್ವಾಮಿಯ ಉದ್ಘೋಷ ಮುಗಿಲು ಮುಟ್ಟಿತು.
ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ ‘ಸದ್ದಲೇ’ ಎಂದು ಕೂಗುತ್ತಿದ್ದಂತೆ ಡೆಂಕನಮರಡಿಯಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಕ್ಷಣಕಾಲ ಸ್ತಬ್ಧವರಾದರು. ಆಗ ಗೊರವಯ್ಯ ರಾಮಣ್ಣ ದೈವವಾಣಿಯನ್ನು ನುಡಿದು ಕೆಳಕ್ಕೆ ಜಿಗಿದರು. ಸುತ್ತಲೂ ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯು ಈ ವರ್ಷದ ಭವಿಷ್ಯವಾಣಿ ಆಗಿರಲಿದೆ ಎಂಬುದು ಭಕ್ತರ ನಂಬಿಕೆ.
ಸ್ಥಳೀಯ ಶಾಸಕ ಕೃಷ್ಣನಾಯಕ, ಬಳ್ಳಾರಿ ಸಂಸದ ಈ. ತುಕಾರಾಂ, ಐಜಿಪಿ ಲೋಕೇಶ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಮುಜರಾಯಿ ಇಲಾಖೆ ಎಂ.ಹೆಚ್. ಪ್ರಕಾಶ್ ರಾವ್, ಹೆಚ್.ಗಂಗಾಧರ್ ಭಾಗಿಯಾಗಿದ್ದರು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಹನುಮಂತಪ್ಪ ಉತ್ತಮ ಧ್ವನಿವರ್ಧಕದ ವ್ಯವಸ್ಥೆ ಮಾಡಿದ್ದರಿಂದ ಕಾರ್ಣಿಕ ಸ್ಪಷ್ಟವಾಗಿ ಕೇಳಿಸಿತು.