ಬಜೆಟ್ ಮೇಲಿನ ಚರ್ಚೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತರಾಟೆ
ನವದೆಹಲಿ, ಫೆ.12- ಕೇಂದ್ರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ತೆರಿಗೆ ನೀಡುವ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೆ ಕೇಂದ್ರ ಬಜೆಟ್ನಲ್ಲಿ ದೊರೆತಿದ್ದು ಮಾತ್ರ ಅತ್ಯಲ್ಪ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ `3D’ ನೀತಿ ಅಂದರೆ Discriminate (ತಾರತಮ್ಯ), Delay (ವಿಳಂಬ), Deny (ನಿರಾಕರಿಸು) ತೋರಿಸಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ನವದೆಹಲಿಯ ಸಂಸತ್ನ ಬಜೆಟ್ ಅಧಿವೇಶನದ ಚರ್ಚೆಯ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಭರವಸೆ ನೀಡಿದರೂ, ವಾಸ್ತವದಲ್ಲಿ ಇದು ಕೆಲವರ ಜೊತೆ ಕೆಲವರ ಸಾಥ್ ಅಭಿವೃದ್ಧಿ ಎನ್ನುವಂತಾಗಿದೆ. ಕೇಂದ್ರ ವಿತ್ತ ಸಚಿವರು `ಮಧ್ಯಮವರ್ಗದ ಧ್ವನಿಯನ್ನು ಕೇಳಿದ್ದೇನೆ’ ಎಂದು ಹೇಳುತ್ತಾರೆ. ಆದರೆ 2023-24ನೇ ಹಣಕಾಸು ವರ್ಷದಲ್ಲಿ ಕೇವಲ ಶೇ.6.68 ಜನರು ಮಾತ್ರ ಆದಾಯ ತೆರಿಗೆ ಸಲ್ಲಿಸಿದ್ದಾರೆ. ಭಾರತದ ಜನಸಂಖ್ಯೆ 142 ಕೋಟಿ. ಹೀಗಿದ್ದಾಗ ಹಣಕಾಸು ಸಚಿವರು ಯಾವ ಮಧ್ಯಮ ವರ್ಗದ ಬಗ್ಗೆ ಮಾತನಾಡುತ್ತಿದ್ದಾರೆ? ದಿನಕ್ಕೆ ಶೇ 100ಕ್ಕೂ ಕಡಿಮೆ ಆದಾಯವಿರುವ ಬಡವರಿಗೆ ಏನಾದರೂ ಪರಿಹಾರವಿದೆಯಾ ಎಂದು ಸಂಸದರು ಪ್ರಶ್ನಿಸಿದ್ದಾರೆ.
ಪದವೀಧರ ನಿರುದ್ಯೋಗದ ಪ್ರಮಾಣ ಶೇ.29.1 ಇದೆ. ಇದು ಇತ್ತೀಚಿನ ಇತಿಹಾಸದಲ್ಲೇ ಅತಿ ಹೆಚ್ಚು. 2024ರ ಜೂನ್ನಲ್ಲಿ ನಿರುದ್ಯೋಗದ ಪ್ರಮಾಣ ಶೇ.9.2 ಏರಿಕೆಯಾಯಿತು. 2014 ರಿಂದ, ನೈಜ ವೇತನ (real wage growth) ಕುಸಿದಿದೆ. ಕೃಷಿ ಕಾರ್ಮಿಕರ ವೇತನ ಕೇವಲ ಶೇ.0.8 ಏರಿಕೆಯಾಗಿದೆ. ಅನೌಪಚಾರಿಕ ವಲಯದಲ್ಲಿ ಶೇ.0.2 ಮಾತ್ರ ಹಾಗೂ ಕಟ್ಟಡ ಕಾರ್ಮಿಕರಿಗೆ ಅತ್ಯಲ್ಪ ವೇತನವಿದೆ.
ಸರ್ಕಾರಿ ಬ್ಯಾಂಕುಗಳು ಶ್ರೀಮಂತರಿಗೆ ಕಳೆದ 5 ವರ್ಷಗಳಲ್ಲಿ ಶೇ.9.90 ಲಕ್ಷ ಕೋಟಿ ಸಾಲ ಮನ್ನಾ ಮಾಡಿವೆ ಇದು ವಿಕಸಿತ ಭಾರತವೇ? ಇನ್ನು ಗೃಹ ಸಾಲ ಮತ್ತು ನಿರ್ವಹಣಾ ಸಾಲಗಳ ಪ್ರಮಾಣ ಜಿಡಿಪಿ ನ ಶೇ.39 ತಲುಪಿದೆ, ಜನ ಸಾಮಾನ್ಯರು ಸಾಲದ ಹೊರೆ ಹೊತ್ತಿದ್ದಾರೆ. 2015 ರಿಂದ 2024ರ ಅವಧಿಯಲ್ಲಿ 24 ಲಕ್ಷ ಚಿಕ್ಕ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ವಿಕಸಿತ ಭಾರತ ಎಂಬ ಪರಿಕಲ್ಪನೆ ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ನಬಾರ್ಡ್ ನ ಅನುದಾನವನ್ನು ಶೇ.58 ಕಡಿತ ಮಾಡಲಾಗಿದೆ. ಸಹಕಾರ ಬ್ಯಾಂಕುಗಳ ಸ್ಥಿತಿ ಶೋಚನೀಯವಾಗಿದೆ. ರೈತರ ನೆರವಿಗಾಗಿ ಸರ್ಕಾರ ಯಾವುದೇ ಸಹಾಯ ಮಾಡುತ್ತಿಲ್ಲ. ಎಂಎಸ್ಪಿ ಕಾನೂನಾಗಿ ಘೋಷಣೆ ಮಾಡದಿರುವುದರಿಂದ, ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ.
2025-26ನೇ ಹಣಕಾಸು ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.99.858 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಬಹಳ ಕಡಿಮೆ. ಭಾರತದ ಆರೋಗ್ಯ ವ್ಯಯ ಜಿಡಿಪಿ ನ ಕೇವಲ ಶೇ.2 ಮಾತ್ರ. ವೈದ್ಯಕೀಯ ದರ ಏರಿಕೆ ಶೇ.14 ತಲುಪಿದೆ. ಇದು ಏಷ್ಯಾದ ರಾಷ್ಟ್ರಗಳಲ್ಲೇ ಅತಿ ಹೆಚ್ಚು. ದೇಶದಲ್ಲಿರುವ ಆಸ್ಪತ್ರೆಗಳಲ್ಲಿನ ತುರ್ತು ವೈದ್ಯರ ಕೊರತೆಯ ಪ್ರಮಾಣ ಶೇ.79.5 ಇದೆ, ತಜ್ಞ ವೈದ್ಯರು 36 ಗಂಟೆಗಳ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.
ಕೇಂದ್ರ ಸರ್ಕಾರ `ಮಹಿಳಾ ಶಕ್ತೀಕರಣ’ ಎಂದು ಘೋಷಿಸುತ್ತದೆಯಾದರೂ ಆಶಾ ಕಾರ್ಯಕರ್ತರಿಗೆ ಕೇವಲ ರೂ. 2.000 ವೇತನ ನೀಡಲಾಗುತ್ತಿದೆ. ಇದು ಮಹಿಳಾ ಸಬಲೀಕರಣವೆ? ಕರ್ನಾಟಕ ಸರ್ಕಾರ 2025ರ ಏಪ್ರಿಲ್ 1 ರಿಂದ ಆಶಾ ಕಾರ್ಯಕರ್ತರಿಗೆ ಶೇ.10,000 ವೇತನವನ್ನು ಘೋಷಿಸಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ಗಳಿಗೆ ಸಾವಿರಾರು ಕೋಟಿ ರಿಯಾಯಿತಿಗಳನ್ನು ನೀಡಿದರೂ, ಮಹಿಳಾ ಆರೋಗ್ಯ ಕಾರ್ಯಕರ್ತರ ಜೀವನೋಪಾಯಕ್ಕೆ ಕೇವಲ ರೂ. 2,000 – 4,000 ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಜೆಟ್ ಕೇವಲ ವೈಫಲ್ಯವಲ್ಲ, ಭಾರತದ ಕಾರ್ಮಿಕ ವರ್ಗ, ರೈತರು, ಮಹಿಳೆಯರು, ಯುವಕರು—ಎಲ್ಲರಿಗೂ ಮಾಡಿದ ದ್ರೋಹವಾಗಿದೆ.
ನಮ್ಮ ಕಾರ್ಮಿಕರ ಶಕ್ತಿಯನ್ನು ಕುಗ್ಗಿಸಿ, ನಮ್ಮ ರೈತರ ಆಶಯಗಳನ್ನು ತುಳಿದು, ನಮ್ಮ ಮಹಿಳೆಯರ ಸಮಾನತೆಯನ್ನು ನಿರಾಕರಿಸಿ, ನಮ್ಮ ಯುವಕರ ಭವಿಷ್ಯವನ್ನು ನಿರ್ಲಕ್ಷಿಸಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಪ್ರಭಾ ಅವರು ಬಜೆಟ್ ಕುರಿತು ಸಂಸತ್ ಸದನದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.