ಕೊಂಡಜ್ಜಿ, ಫೆ 10 – ಹಾಸ್ಯ, ಚಾರಿತ್ರಿಕ, ಸಾಮಾಜಿಕ, ಪೌರಾಣಿಕ ಯಾವುದೇ ನಾಟಕಗಳಾಗಲೀ ಅದಕ್ಕೆ ರಚಿಸುವ ಸಾಹಿತ್ಯ ಪರಿಣಾಮಕಾರಿಯಾಗಿದ್ದರೆ ಮಾತ್ರ ಪ್ರೇಕ್ಷಕರನ್ನು ತಲುಪುತ್ತದೆ. ಜೊತೆಗೆ ಸಮಾಜಕ್ಕೊಂದು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮುಂದೊಂದು ದಿನ ಪುನಃ ರಂಗಭೂಮಿ ಕಳೆದುಕೊಂಡ ವೈಭವವನ್ನು ಮರಳಿ ಪಡೆಯಲಿದೆ ಎಂದು ರಂಗ ತಜ್ಞ ಡಾ. ಡಿ.ಎಸ್. ಚೌಗಲೆ ಅವರು ಆಶಯ ವ್ಯಕ್ತಪಡಿಸಿದರು.
ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಸ್ಕೌಟ್ ಕ್ಯಾಂಪ್‌ನಲ್ಲಿ ವೃತ್ತಿ ರಂಗಭೂಮಿ ರಂಗಾಯಣ (ದಾವಣಗೆರೆ), ಕರ್ನಾಟಕ ನಾಟಕ ಅಕಾಡೆಮಿ, (ಬೆಂಗಳೂರು) ಇವರ ಸಹಯೋಗದೊಂದಿಗೆ ಇಂದು ಏರ್ಪಡಿಸಿದ್ದ ವೃತ್ತಿ ರಂಗನಾಟಕ ಎರಡನೇ ದಿನದ ರಚನಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ರಾಮಕೃಷ್ಣ ಮರಾಠೆ ಮಾತನಾಡಿ ರಂಗಭೂಮಿಯ ಸಾಹಿತ್ಯ ಹಿಂದಿನ ಪೀಳಿಗೆಯಲ್ಲಿ ಸದಾ ಚೇತೋಹಾರಿಯಾಗಿತ್ತು. ಆದರೆ ಇಂದಿನ ಪೀಳಿಗೆ ಅದನ್ನು ದಾಟಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಇಂತಹ ಶಿಬಿರಗಳಿಂದ ನಾಟಕಗಳ ಇಹ ಮತ್ತು ಪರಗಳ ಆಳ, ಹರಿವು ತಿಳಿಯುತ್ತದೆ. ಇದರೊಂದಿಗೆ ತಾತ್ವಿಕ ಸಂಸ್ಕಾರ ಹಾಗೂ ಜ್ಞಾನ ಅಧ್ಯಾತ್ಮಿಕದ ಅರಿವು ಒಂದು ರಾತ್ರಿ ಕಳೆಯುವುದರೊಳಗಾಗಿ ಸಮಾಜವನ್ನು ಮುಟ್ಟುವ ಶಕ್ತಿ ರಂಗಭೂಮಿಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಾವಣಗೆರೆ ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಶಿಬಿರಾರ್ಥಿಗಳೊಂದಿಗೆ ಅಲ್ಲಲ್ಲಿ ಸಂವಾದ ನಡೆಸಿ ಒಟ್ಟಾರೆ ರಂಗಭೂಮಿಯ ಚಿಂತನೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಬಸವರಾಜ ಪಂಚಗಲ್ ಉಪಸ್ಥಿತರಿದ್ದರು. ಶಿಬಿರ ದಲ್ಲಿ ಆರು ಮಂದಿ ಮಹಿಳೆಯರು ಸೇರಿದಂತೆ ರಾಜ್ಯಾದ್ಯಂತ ಇಪ್ಪತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಸಂವಾದ ನಡೆಸಿದರು.