ಶ್ರೀ ರಾಮಾಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀ ವರಸದ್ಯೋಜಾತ ಸ್ವಾಮೀಜಿ
ಹರಪನಹಳ್ಳಿ,ಫೆ.8- ಶ್ರೀರಾಮಚಂದ್ರನ ಆದರ್ಶ ಗುಣಗಳು ಹಾಗೂ ಧಾರ್ಮಿಕ ಜೀವನ ವೈಶಿಷ್ಟ್ಯಗಳನ್ನು ಒಮ್ಮೆ ನೋಡಿದರೆ, ಅವನ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿ ಪರಿಣಮಿ ಸುತ್ತದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತೆಲುಗರ ಬೀದಿಯಲ್ಲಿ ಶ್ರೀ ರಾಮಾಂಜನೇಯ ಟ್ರಸ್ಟ್ ಹಾಗೂ ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀ ರಾಮಾಂಜನೇಯ ದೇವಸ್ಥಾನದ ಕಳಸಾ ರೋಹಣ ಮತ್ತು ಗರುಡ ಸ್ಥಂಭ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಮನು ರಾಜ ಮಾತ್ರವಲ್ಲ, ಅವನು ನಂಬಿಕೆ, ಸತ್ಯ, ತ್ಯಾಗ ಮತ್ತು ಪ್ರೇಮದ ಪ್ರತಿರೂಪ. ರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದೇ ಇರುತ್ತಾರೆ. ತುಂಬಿದ ಕುಟುಂಬವೇ ರಾಮಾವತಾರದ ಸಂದೇಶ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ, ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಅಲ್ಲಿ ಚಿಕ್ಕ ಅಳಿಲಿಗೂ ಮಹತ್ತರ ಸ್ಥಾನವಿದೆ.
ಪ್ರಾಮಾಣಿಕತೆ, ಸಹನೆಯಂತ ಗುಣಗಳು ಮಾನವ ಜಗತ್ತಿಗೆ ಶಾಶ್ವತ ಮಾದರಿಯಾಗಿವೆ. ತನ್ನ ಮಾತಿಗೆ ಮತ್ತು ಶಪಥಕ್ಕೆ ಸದಾ ನಿಷ್ಠನಾಗಿದ್ದ ರಾಮನ ಆದರ್ಶ, ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯ.
ಇಂದು, ಶ್ರೀರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ನಾವು ಶಾಂತಿ, ಸೌಹಾ ರ್ದತೆ, ಮತ್ತು ಸಜ್ಜನಿಕೆಯುಕ್ತ ಸಮಾಜವನ್ನು ನಿರ್ಮಿಸಬಹುದು. ನಮ್ಮ ನೈತಿಕತೆ, ಪ್ರೀತಿಯ ಮತ್ತು ಭಕ್ತಿಯ ಬೆಳವಣಿಗೆಯಲ್ಲಿ ರಾಮನ ತತ್ವಗಳು ಪ್ರೇರಣೆಯಾಗಲಿ ಎಂದರು.
ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ರಾಮನು ತನ್ನ ಜೀವನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮತೋಲನವನ್ನು ಕಾಪಾಡಿದ ಮಹಾ ವ್ಯಕ್ತಿ. ತಂದೆಯ ಆದೇಶಕ್ಕೆ ಗೌರವ ನೀಡಿ, ತನ್ನ ರಾಜನ ಸ್ಥಾನವನ್ನು ತ್ಯಜಿಸಿ, ಅರಣ್ಯಕ್ಕೆ ತೆರಳಿದ ಮಹಾನ್ ಧೀರ. ಪತ್ನಿ ಸೀತೆಯನ್ನೂ ಸಹೃದಯತೆಯಿಂದ ರಕ್ಷಿಸಿದ. ಅದೇ ರೀತಿ, ವಾನರ ಸೇನೆಯೊಡ ಗೂಡಿ ರಾಮರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಸಮರ್ಥ ನಾಯಕ ಎಂದರು.
ವೇಳೆ ಪುರಸಭೆ ಅಧ್ಯಕ್ಷರಾದ ಎಂ.ಪಾತೀಮಾಭಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯ ಮಂಜುನಾಥ ಇಜಂತಕರ್, ಪಿ ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಗೊಂಗಡಿ ನಾಗರಾಜ, ಬಸಪ್ಪ ದಾನಿ, ದಾನ ಚಿಂತಾಮಣಿ ಲಲಿತಮ್ಮ ಮತ್ತು ಇತರರು ಉಪಸ್ಥಿತರಿದ್ದರು.