ನಗರದಲ್ಲಿ ಇಂದು ವೃತ್ತಿ ರಂಗನಾಟಕ ರಚನಾ ಶಿಬಿರ

ದಾವಣಗೆರೆ, ಫೆ.8- ವೃತ್ತಿ ರಂಗಭೂಮಿ ರಂಗಾಯಣ (ದಾವಣಗೆರೆ) ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಸಹಯೋಗದಲ್ಲಿ ನಾಳೆ ದಿನಾಂಕ 9 ರಿಂದ 13ರ ವರೆಗೆ ಕೊಂಡಜ್ಜಿಯ ಸ್ಕೌಟ್ ಕ್ಯಾಂಪ್‌ನಲ್ಲಿ ವೃತ್ತಿ ರಂಗನಾಟಕ ರಚನಾ ಶಿಬಿರ ಏರ್ಪಡಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.9ರ ಬೆಳಗ್ಗೆ 10.30ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ನಾಟಕಕಾರರು, ವಿಮರ್ಶಕರು ಆದ ಡಾ.ಕೆ.ವೈ.ನಾರಾಯಣಸ್ವಾಮಿ ಶಿಬಿರ ಉದ್ಘಾಟಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ನಾಟಕಕಾರ ಬಸವರಾಜ ಪಂಚಗಲ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಐದು ದಿನ ನಡೆಯುವ ಶಿಬಿರದಲ್ಲಿ ಸಂಪನ್ಮೂಲ ರಂಗತಜ್ಞರಾದ ಡಾ.ಡಿ.ಎಸ್.ಚೌಗಲೆ, ಡಾ.ರಾಮಕೃಷ್ಣ ಮರಾಠೆ, ಗಣೇಶ ಅಮೀನಗಢ, ಜೇವರ್ಗಿ ರಾಜಣ್ಣ, ವೈ.ಎನ್.ಪುಟ್ಟಣ್ಣಯ್ಯ, ನಟರಾಜ ಹೊನ್ನವಳ್ಳಿ ರಂಗ ಸಜ್ಜಿಕೆ, ನಾಟಕ ರಚನೆ ಸೇರಿ ನಾನಾ ವಿಷಯಗಳ ಬಗ್ಗೆ ಭಾಗವಹಿಸಲಿರುವ 25 ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!