ನಾಡಿನ ಶ್ರೀಗಳಿಂದ ಇಂದು ಸನ್ಯಾಸ ದೀಕ್ಷೆ
ಮನೋಹರ ಮಲ್ಲಾಡದ, ರಾಣೇಬೆನ್ನೂರು
ಕುಂತಿದೇವಿಯು ಗಜಗೌರಿ ವೃತ ಮಾಡಿದ ಸಂದರ್ಭದಲ್ಲಿ ಇಂದ್ರನು ಕಳಿಸಿದ ಐರಾವತ ಇಲ್ಲಿ ಭೂಸ್ಪರ್ಶ ಮಾಡಿದ್ದರಿಂದ ಐರಾವತ ಕ್ಷೇತ್ರವೆಂದು ಪ್ರಸಿದ್ದಿ ಪಡೆದ ಈಗಿನ ಐರಣಿಯಲ್ಲಿ ತ್ರಿಮೂರ್ತಿ ದತ್ತಾತ್ರೇಯ ಸ್ವಾಮಿ ನೆಲೆಸಿದ್ದರಿಂದ `ದತ್ತಾತ್ರೇಯ ಅವದೂತ ಗುರುಪೀಠವೆಂದು’, ಬಸವೇಶ್ವರರ ಅಪರಾವತಾರ ವೆನ್ನುವ ಪ್ರಖ್ಯಾತಿ ಪಡೆದ ಕೊಟ್ಟೂರು ಗುರುಬಸವೇ ಶ್ವರರು ದೀರ್ಘಕಾಲ ಇಲ್ಲಿ ನೆಲೆಸಿ, ತಮ್ಮ ಅನೇಕ ಲೀಲೆಗಳನ್ನು ತೋರಿಸಿ ಕ್ಷೇತ್ರದ ಆದಿದೇವತೆಯಾದದ್ದು, ದಾವಣಗೆರೆಯ ಗುರು ಬಕ್ಕೇಶ್ವರರು ಇಲ್ಲಿ ಲಿಂಗಾಂಗ ಸಾಮರಸ್ಯದ ಗುರಿ ತಲುಪಿದ್ದು. ಇವೆಲ್ಲವುಗಳ ಸಂಗಮದಿಂದ ಈ ಗ್ರಾಮ ಪುಣ್ಯಭೂಮಿ ಯಾಗಿದೆ. ಈ ಕ್ಷೇತ್ರದ ಮಹಿಮೆ ಅರಿತ ಶೃಂಗೇರಿ ಶಾರದಾ ಪೀಠದ ಪರಂಪರೆಯ ಮಠಾಧೀಶರು ಇಲ್ಲಿ ಕಲ್ಲಿನ ಗುಡಿ ಕಟ್ಟಿಸಿ ಕಾಶಿಯಿಂದ ತರಿಸಿದ ಓಂಕಾರೇಶ್ವರ ಲಿಂಗ ಸ್ಥಾಪಿಸಿ ದೀಪಾರಾಧನೆಗೆ ಇಪ್ಪತ್ನಾಲ್ಕು ಎಕರೆ ಜಮೀನು ಜಹಗೀರು ಕೊಟ್ಟಿದ್ದಾರೆ.
ಈ ಪುಣ್ಯಕ್ಷೇತ್ರದಲ್ಲಿ ಜನ್ಮತಳೆದು ಬಾಲಲೀಲೆಗಳ ಮೂಲಕ ಜನರಿಗೆ ಭಕ್ತಿ ಮಾರ್ಗ ತೋರಿಸುತ್ತಿದ್ದ ಮುಪ್ಪಿನಾರ್ಯರು ತಮ್ಮ ಅಧ್ಯಾತ್ಮದ ಹಸಿವು ಇಂಗಿಸಿಕೊಳ್ಳಲು ಅಲೆದಾಟ ನಡೆಸಿದ್ದಾಗ ಮಾಣಿಕ್ಯದಂತೆ ದೊರೆತ ಅದೈತ್ ಚಕ್ರವರ್ತಿ ಸಿದ್ದಾರೂಢರನ್ನು ಗುರು ಗಳಾಗಿ ಸ್ವೀಕರಿಸಿ, ಅವರ ಆಣತಿಯಂತೆ ಉತ್ತರವಾಹಿನಿ ತುಂಗಭದ್ರೆಯ ಎಡ ತೀರದಲ್ಲಿ ಮಠ ಸ್ಥಾಪಿಸಿ ಅನ್ನ ಹಾಗೂ ಜ್ಞಾನ ದಾಸೋಹವನ್ನು ಕರುಣಿಸಿ ಸುತ್ತಲಿನ ಭಕ್ತರ ಬವಣೆಯನ್ನು ದೂರೀಕರಿಸಿ ಮಹಾತ್ಮರಾದರು.
ದಶಕಗಳಿಂದ ಮಕ್ಕಳನ್ನು ಪಡೆಯಲು ಹಂಬಲಿಸುತ್ತಿದ್ದ ಹೊನ್ನಾಳಿ ತಾಲ್ಲೂಕಿನ ಕೋಣನತಲೆಯ ಸಿದ್ದಾರೂಢರ ಪರಂಪರೆಯ ಮುಪ್ಪಿನಾರ್ಯರ, ಬಸವರಾಜಪ್ಪಜ್ಜನ ಭಕ್ತರಾದ ಬಿ.ವೀರಣ್ಣ ಹಾಗೂ ಅನಿತಮ್ಮ ದಂಪತಿ, ಘಟಸ್ಥಾಪನೆಗೆ ಅಜ್ಜ ಕೊಡುತ್ತಿದ್ದ ಕಾಯಿಗಳನ್ನು ಸ್ವೀಕರಿಸಿ ಪೂಜಿಸಿದ ಫಲವಾಗಿ ದಂಪತಿ ಪುಣ್ಯಗರ್ಭದಲ್ಲಿ ಗಂಡು ಮಗು ಜನಿಸಿದ್ದು, ಶಿಶುವಿನಿಂದಲೇ ಪುಣ್ಯಾತ್ಮರ ಕೃಪಾಶೀರ್ವಾದದಲ್ಲಿ ಬೆಳೆಯುತ್ತಿರುವ ಆ ಸಿದ್ದಾರೂಢ ಬಾಲಕನೇ ಹೊಳೆಮಠದ ಉತ್ತರಾಧಿಕಾರಿಯಾಗುತ್ತಾರೆ.
ಬದುಕಿದರೆ ಮಠಕ್ಕೆ, ಸತ್ತರೆ ಸ್ಮಶಾನಕ್ಕೆ ಎನ್ನುವಂತಿದ್ದ ಅನಾರೋಗ್ಯ ಪೀಡಿತ ಬಾಲಕನನ್ನು ಪಾಲಕರಿಂದ ಪಡೆದು ಉಳಿಸಿ, ಬೆಳೆಸಿ, ಅವರ ಕೈಗೆ ಮಠದ ಹೊಣೆಗಾರಿಕೆಯನ್ನಿಟ್ಟ ಮುಪ್ಪಿನಾರ್ಯರ ಕರಸಂಜಾತರಾಗಿ ಬೆಳೆದ ಬಸವರಾಜ ಶ್ರೀಗಳು, ಮುಪ್ಪಿನಾರ್ಯರು ಉಳಿಸಿದ ಎಲ್ಲ ಕಾರ್ಯವನ್ನು ಪೂರ್ಣಗೊಳಿಸಿ, ಜೊತೆಗೆ ಎಲ್ಲ ರೀತಿಯಿಂದಲೂ ಸಂಪದ್ಭರಿತ ಮಠವನ್ನಾಗಿಸಿ, ತಮ್ಮ ಕರಸಂಜಾತ ಸಿದ್ಧಾರೂಢ ವಟುವನ್ನು ತಮ್ಮ ಉತ್ತರಾಧಿಕಾರಿ ಮಾಡಿಕೊಂಡಿದ್ದು ದಿನಾಂಕ 10.02.2025 ರ ಸೋಮವಾರ ಅವರಿಗೆ ಹೊಣೆಗಾರಿಕೆ ವಹಿಸಲಿದ್ದಾರೆ.
ಮಠದ ಸಂಚಾಲಕ ಬಾಬು ಶೆಟ್ಟರ ಅವರಾಡುವ ಮಾತುಗಳನ್ನು ಗಮನಿಸಿದಲ್ಲಿ ಮುಪ್ಪಿನಾರ್ಯರಂತೆ ಸಂಪೂರ್ಣ ಸನ್ಯಾಸ ಜೀವನ ಕಳೆದ ಬಸವರಾಜಪ್ಪಜ್ಜ ಸಹ, ಮಠದ ಹಾಗೂ ಭಕ್ತರ ಆಶಯಗಳಿಗೆ ಸ್ಪಂದಿಸುವ ಅತ್ಯದ್ಭುತ ವ್ಯಕ್ತಿತ್ವ ಹೊಂದಿದ ಉತ್ತರಾಧಿಕಾರಿಯನ್ನ ನೇಮಿಸಿದ್ದಾರೆ. ಈ ನೂತನ ಶ್ರೀ ಸಿದ್ದಾರೂಢರಿಂದ ಈ ಕ್ಷೇತ್ರ ಇನ್ನಷ್ಟು ಪಾವನಮಯವಾಗಲಿದೆ ಎನ್ನುವ ನಂಬುಗೆ ವ್ಯಕ್ತಪಡಿಸುತ್ತಾರೆ.
ತ್ಯಾಗಮಯಿ…
ಸಂಪ್ರದಾಯದಂತೆ ಸನ್ಯಾಸತ್ವ ನೀಡಲು ತಂದೆ-ತಾಯಿಯರ ಒಪ್ಪಿಗೆ ಪಡೆಯಲು, ಮಠದ ಭಕ್ತರೊಂದಿಗೆ ಬಸವರಾಜ ಶ್ರೀಗಳು ಕೋಣನತಲೆಯ ಸಿದ್ದಾರೂಢರ ನಿವಾಸಕ್ಕೆ ತೆರಳಿ, ವಿಷಯ ಪ್ರಸ್ತಾಪಿಸಿದಾಗ ತಾಯಿ ಅನಿತಮ್ಮ ಮಗನನ್ನು ಕಳೆದುಕೊಳ್ಳುವ ದುಃಖವನ್ನು ತಡೆದುಕೊಳ್ಳಲಾರದೆ ಕಣ್ಣೀರಧಾರೆ ಹರಸಿದಳು. ಶ್ರೀಗಳು, ಬಾಲಕ ಸಿದ್ದಾರೂಢರ ತಂದೆ ವೀರಣ್ಣ, ಸಹೋದರಿ ಶಾರುವಾಣಿ ಸೇರಿದಂತೆ ನೆರೆದವರೆಲ್ಲ ತಾಯಿಯ ನೋವಿಗೆ ಧ್ವನಿಯಾದರೆ, ಇದೆಲ್ಲವನ್ನು ಕಂಡ ಬಾಲಕ ಸಿದ್ದಾರೂಢರು ಏನನ್ನೂ ಪ್ರತಿಕ್ರಿಯಿಸದೆ ಸ್ಥಿತಪ್ರಜ್ಞರಂತಾಗಿದ್ದು, ನೆರೆದವರನ್ನು ದಿಗ್ಮೂಢರನ್ನಾಗಿಸಿದ್ದಿತು.
ಅದೆಷ್ಟೋ ಪೀಠಾಧಿಪತಿಗಳು ತಮ್ಮ ಇಳಿವಯಸ್ಸಿನಲ್ಲೂ ಸಹ ಪೂರ್ವಾಶ್ರಮದ ಮೋಹ ಉಳಿಸಿಕೊಂಡವರ ಬಗ್ಗೆ ಕೇಳುತ್ತೇವೆ, ಆದರೆ ಬಾಲಕ ಸಿದ್ದಾರೂಢರು ಪೀಠವೇರುವ ಮೊದಲೇ ಪೂರ್ವಾಶ್ರಮದ ಮೋಹ ತೊರೆದು ತಮ್ಮ ಬದುಕನ್ನು ಭಕ್ತರಿಗರ್ಪಿಸಿದ್ದು ಸಾಬೀತಾದಂತಾಯಿತು ಎಂದು ಈ ಘಟನೆಯನ್ನು ಪ್ರಸ್ತಾಪಿಸುವ ಮಾತುಗಳು ಹರಿದಾಡುತ್ತಿವೆ.