ಮುಜರಾಯಿ ದೇಗುಲ ಮರು ಸ್ವೀಕಾರಕ್ಕೆ ಟ್ರಸ್ಟ್‌ಗಳು ಮುಂದಾಗಬೇಕು

ಮುಜರಾಯಿ ದೇಗುಲ ಮರು ಸ್ವೀಕಾರಕ್ಕೆ ಟ್ರಸ್ಟ್‌ಗಳು ಮುಂದಾಗಬೇಕು

ದೇವಸ್ಥಾನ ಮಹಾಸಂಘದ `ಜಿಲ್ಲಾ ಮಟ್ಟದ ಮಂದಿರ ಅಧಿವೇಶನ’ದಲ್ಲಿ ಗುರುಪ್ರಸಾದ್‌ ಗೌಡ್ರು ಅಭಿಮತ

ಹಿಂದೂಗಳು ಆಸೆ, ಆಮಿಷಕ್ಕೆ ಒಳಗಾಗಿ ಮತಾಂತರ ಆಗುತ್ತಿದ್ದಾರೆ. ನಮ್ಮ ಸನಾತನ ಸಂಸ್ಕೃತಿಯನ್ನು ಮರೆಯಿತ್ತಿದ್ದಾರೆ. ಹಾಗಾಗಿ ಪ್ರತಿ ಹಳ್ಳಿ-ಹಳ್ಳಿಯಲ್ಲೂ ಧರ್ಮ ಜಾಗೃತಿ ಆಗಬೇಕಿದೆ.

– ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಹೆಬ್ಬಾಳು.

ದಾವಣಗೆರೆ, ಫೆ.9- ಮುಜರಾಯಿ ಇಲಾಖೆಗೆ ಒಳಪಟ್ಟ ಹಿಂದೂ ದೇವಸ್ಥಾನಗಳನ್ನು ಮರಳಿ ಸ್ವೀಕರಿಸಲು ಆಯಾ ದೇವಸ್ಥಾನ ಟ್ರಸ್ಟಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ತಿಳಿಸಿದರು.

ಹಿಂದೂ ಜನಜಾಗೃತಿ ಸಮಿತಿ ಹಾಗೂ ದೇವಸ್ಥಾನ ಮಹಾಸಂಘದ ವತಿಯಿಂದ ನಗರದ ದಾವಣಗೆರೆ-ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಜಿಲ್ಲಾ ಮಟ್ಟದ ಮಂದಿರ ಅಧಿವೇಶನ’ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 34,500ಕ್ಕೂ ಅಧಿಕ ದೇವಸ್ಥಾನಗಳು ಸರ್ಕಾರದ ಸುಪರ್ದಿಯಲ್ಲಿದ್ದು, ಸರ್ಕಾರ ದೇವಸ್ಥಾನವನ್ನು ಅಭಿವೃದ್ಧಿಗೊಳಿಸುವ ಚಿಂತನೆ ಮಾಡದೇ, ಅಲ್ಲಿ ಕ್ರೋಢೀಕರಣಗೊಳ್ಳುವ ಭಕ್ತರ ಹಣವನ್ನು ಸರ್ಕಾರ ಕಬಳಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಅಧೀನದಲ್ಲಿರುವ ಹಿಂದೂ ದೇವಾಲಯಗಳಿಂದ ಕೋಟಿಗಟ್ಟಲೇ ಹಣ ಸಂಗ್ರಹ ಆಗುತ್ತದೆ. ಈ ಹಣವನ್ನು ಸರ್ಕಾರ ಅನ್ಯಮತೀಯರಿಗೆ ಹಾಗೂ ಸರ್ಕಾರದ ಇತರೆ ಬಳಕೆಗೆ ಬಳಸಿಕೊಳ್ಳುತ್ತಿದೆ. ಹಾಗಾಗಿ ನಮ್ಮ ದೇವಸ್ಥಾನದಲ್ಲಿನ ಹಣ ನಮ್ಮಲ್ಲೇ ಉಳಿಸಿಕೊಳ್ಳಲು ಜಾಗೃತರಾಗಬೇಕಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಸೇರಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ 15 ವರ್ಷದ ಆಡಿಟ್‌ ವರದಿ ಕೇಳಿದಾಗ, ಅದರಲ್ಲಿ 21 ಕೋಟಿ ರೂ.ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿವೆ. ಪಂಡರಾಪುರ ವಿಠ್ಠಲ ದೇವಸ್ಥಾನಕ್ಕೆ ಭಕ್ತರು ಕೊಟ್ಟ ಹಸುಗಳನ್ನು 4 ಬಾರಿ ಕಸಾಯಿ ಖಾನೆಗೆ ಕಳಿಸಿ ಹಣ ಸಂಗ್ರಹಿಸಿದ್ದಾರೆ ಎಂದು ದೂರಿದರು.

ಹೀಗೆ ಮುಜರಾಯಿ ಇಲಾಖೆಗೆ ಸೇರಿದ ಅನೇಕ ಹಿಂದೂ ದೇವಸ್ಥಾನಗಳ ಜಮೀನು, ಹಣ, ಆಭರಣ ಸೇರಿದಂತೆ ಇತರೆ ಸಂಪತ್ತಿನಲ್ಲಿ ಅಕ್ರಮ ನಡೆದಿದೆ. ಇದರಿಂದ ಹಿಂದೂಗಳಿಗೆ ಅನ್ಯಾಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಹಿಂದೂಗಳು ಜಾಗೃತರಾಗಿ ನಮ್ಮ ದೇವಸ್ಥಾನಗಳನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಟ್ರಸ್ಟಿಗಳು ಒಗ್ಗಟ್ಟಾಗಬೇಕು. ಆಂತರಿಕ ಸಮಸ್ಯೆಗಳನ್ನು ಬದಿಗಿಡಬೇಕು. ದೇವಸ್ಥಾನ ಕಾಪಾಡಿಕೊಳ್ಳುವ ಹಿತ ದೃಷ್ಟಿ ಯಿಂದ ನಾವೆಲ್ಲರು ಒಂದಾಗಬೇಕು ಎಂದರು.

ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳ ಟ್ರಸ್ಟಿಗಳು ಒಗ್ಗಟ್ಟಿನಿಂದ ಇರದಿದ್ದರೇ,  ಸರ್ಕಾರಗಳು ದೇವಸ್ಥಾನವನ್ನು ಮುಜರಾಯಿಗೆ ತೆಗೆದುಕೊಳ್ಳುತ್ತದೆ. ಆಗ ಭಕ್ತರ ಹಣ ಸರ್ಕಾರದ ಮಡಿಲಿಗೆ ಸೇರುತ್ತದೆ ಎಂದು ಎಚ್ಚರಿಸಿದರು.

ದೇವಸ್ಥಾನಕ್ಕೆ ಬರುವ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಜಾತಿ-ಭೇದ ಮಾಡ ಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸ ಬೇಕು. ಧರ್ಮ ಜಾಗೃತಿ ಮಾಡಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಬೇಕು.

ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಯುವಕರು ಧರ್ಮ ರಕ್ಷಣೆ ಮಾಡಲು ಮುಂದಾಗಬೇಕು. ಶಿಕ್ಷಣಕ್ಕೆ ಒಲವು ತೋರಿಸಿದಷ್ಟೇ, ಸಂಸ್ಕೃತಿ-ಸಂಸ್ಕಾರಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ದೇಗುಲಗಳ ಟ್ರಸ್ಟಿನ ಪದಾಧಿಕಾರಿಗಳಲ್ಲಿ ಒಡಕುಗಳು ಬರುತ್ತಿರುವುದರಿಂದಲೇ ಅನೇಕ ದೇವಸ್ಥಾನಗಳು ಮುಜರಾಯಿ ಇಲಾಖೆ ಪಾಲಾಗಿವೆ. ಹಾಗಾಗಿ ಟ್ರಸ್ಟಿನ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇದ್ದು, ನಮ್ಮ ಪುರಾತನ ಗುಡಿಗಳು ಸರ್ಕಾರದ ಪಾಲಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಮಲೇಬೆನ್ನೂರಿನ ಚಿದಾನಂದಪ್ಪ, ಆರ್‌.ಎಲ್‌. ಪ್ರಭಾಕರ್‌, ಜಿಲ್ಲೆಯ ವಿವಿಧ ದೇವಸ್ಥಾನಗಳ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!