ಜಗಳೂರು ತಾ. ಹುಚ್ಚಂಗಿಪುರ ಸರ್ಕಾರಿ ಹೈಟೆಕ್ ಶಾಲೆಗೆ 25 ಲಕ್ಷ ರೂ. ವಿಶೇಷ ಅನುದಾನ

ಜಗಳೂರು ತಾ. ಹುಚ್ಚಂಗಿಪುರ ಸರ್ಕಾರಿ ಹೈಟೆಕ್ ಶಾಲೆಗೆ 25 ಲಕ್ಷ ರೂ. ವಿಶೇಷ ಅನುದಾನ

ಶಿಕ್ಷಣ ಸಚಿವ  ಮಧು ಬಂಗಾರಪ್ಪ ಘೋಷಣೆ

ಜಗಳೂರು, ಫೆ. 7 – ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ ಹೈಟೆಕ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಆರಂಭಿಸಿ, ಮೇಲ್ದರ್ಜೆಗೇರಿಸಿ ಶಾಲೆ ಅಭಿವೃದ್ಧಿಗೆ 25 ಲಕ್ಷ ಅನುದಾನ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಶುಕ್ರವಾರ ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ  ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮತ್ತು ಸಂಸದ, ಶಾಸಕರುಗಳ ಪ್ರದೇಶಾಭಿವೃದ್ದಿ ನಿಧಿಯಿಂದ ರೂ. 3.25 ಕೋಟಿ ರೂ. ವೆಚ್ಚದಲ್ಲಿ ನಮ್ಮ ಶಾಲೆ, ನಮ್ಮ ಕೊಡುಗೆ ಯಡಿ ನಿರ್ಮಿಸಲಾದ ನೂತನ ಹೈಟೆಕ್ ಶಾಲಾ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯವ್ಯಾಪಿ 76000 ಶಾಲೆಗಳು, 1.8 ಕೋಟಿ ಮಕ್ಕಳಲ್ಲಿ 57 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಕಟ್ಟಡ, ಶೌಚಾಲಯ, ಶಿಕ್ಷಕರ, ಕೊರತೆಯಿವೆ. ಶೇ. 37 ರಷ್ಟು ಸರ್ಕಾರಿ ನೌಕರರನ್ನೊಳಗೊಂಡ ಅತಿದೊಡ್ಡ ಇಲಾಖೆ ಶಿಕ್ಷಣ ಇಲಾಖೆಯಾಗಿದೆ.ರಾಜ್ಯದಲ್ಲಿ  ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಒಟ್ಟು 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು. ಇದೀಗ 13500 ಶಿಕ್ಷಕರ ಹುದ್ದೆ ಭರ್ತಿಗೆ ಆದೇಶ ಹೊರಡಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕವನ್ನೊಳಗೊಂಡಂತೆ ಹಂತ ಹಂತವಾಗಿ 25000 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಕಂಪನಿಗಳ ಸಿಎಸ್ ಆರ್, ಅಜೀಂ ಪ್ರೇಮ್ ಜಿ ಫಂಡ್‌ಗಳ ಸಹಭಾಗಿತ್ವದಿಂದ ಪ್ರತಿವರ್ಷ ಹತ್ತಾರು ಸಾವಿರ  ಕೋಟಿ ಹಣ ಇಲಾಖೆಯಿಂದ ಖರ್ಚು ಭರಿಸಿ ಮೂಲಸೌಕರ್ಯ ಹಾಗೂ ಪೌಷ್ಠಿಕಾಂಶ ಪೂರೈಕೆಗಾಗಿ  ನೀಡುವ ಮೊಟ್ಟೆಗಳನ್ನು ವಾರಪೂರ್ತಿ ಮಕ್ಕಳಿಗೆ‌ ಶಿಕ್ಷಕರು ವಿತರಿಸಬೇಕು. ಪೋಷಕರು ಮಕ್ಕಳ ಕಡ್ಡಾಯ ಹಾಜರಾತಿಗೆ ಕೈಜೋಡಿಸಿ ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಸ್ಮರಿಸಿದ ಪುತ್ರ ಸಚಿವ ಮಧು ಬಂಗಾರಪ್ಪ, ನನ್ನ ತಂದೆ ಅವರ ಆಡಳಿತಾವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ,  ಆರಾಧನಾ,      ರೈತರ ನೀರಾವರಿಗಾಗಿ ನಿರಂತರ ವಿದ್ಯುತ್  ಪೂರೈಕೆ, ಶಿಕ್ಷಣ ವಂಚಿತರಾಗದಂತೆ ಶಾಲೆಗೆ ಸೇರುವ ಮಗುವಿಗೆ ಪ್ರತಿದಿನ ರೂ. 1 ರೂ ಪ್ರೋತ್ಸಾಹ ಧನ ಸೇರಿದಂತೆ ನನ್ನ ತಂದೆಯವರ ಜನಪರ ಯೋಜನೆಗಳು ನನಗೆ ಸ್ಪೂರ್ತಿ,ಕಣ್ಣಿಗೆ ಕಾಣುವ ದೇವರುಗಳಾದ ಮಕ್ಕಳ ಶಿಕ್ಷಣ ಸೇವೆ ನನ್ನ ಧ್ಯೇಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಟ್ಟಡ ಸುಸಜ್ಜಿತವಾಗಿದ್ದು. ಕಂಪ್ಯೂಟರ್ ಲ್ಯಾಬ್, ಕ್ರೀಡಾಂಗಣ, ಸ್ಮಾರ್ಟ್ ಕ್ಲಾಸ್, ಹೈಟೆಕ್ ಪರಿಕರಗಳಿಂದ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನನ್ನ ಅಮ್ಮನ ಕನಸು ಸಾಕಾರಗೊಳಿಸುವ ಹಿನ್ನೆಲೆಯಲ್ಲಿ ನಮ್ಮ ಊರಿನ   ನಾನು ಓದಿದ ಸರ್ಕಾರಿ ಶಾಲೆಯನ್ನು ಮೊದಲ ಆದ್ಯತೆಯಲ್ಲಿ ಅಭಿವೃದ್ದಿಪಡಿಸಿರುವೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಕುಡಿಯಲು ತುಂಗಾ ನೀರು ಬರಬೇಕಿದೆ. ರಾಜ್ಯದ ಶಿಕ್ಷಣ ಸಚಿವರು ರೂ. 25 ಲಕ್ಷ ಅನುದಾನವನ್ನು ಶಾಲೆ ಮೂಲಸೌಕರ್ಯ ಅಭಿವೃದ್ದಿಗೆ ಒದಗಿಸಬೇಕು.ಜೂನ್ ನಿಂದ 8ನೇ ತರಗತಿ ಆರಂಭಿಸಲು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು. ಕಾಫಿನಾಡಿಗೆ ಗುಳೆಹೋಗುವ ಬಡಕೂಲಿ ಶ್ರಮಿಕ ವರ್ಗ ನನ್ನ ಗ್ರಾಮದ ಜನತೆಗೆ ಶಿಕ್ಷಣ, ಆರೋಗ್ಯ, ಸಾರಿಗೆ ಸೌಕರ್ಯ ಅಗತ್ಯವಿದೆ ಎಂದರು. 

ವಿಧಾನ ಪರಿಷತ್ ಸದಸ್ಯ ಪ್ರೊ. ಸಂಕನೂರು ಮಾತನಾಡಿ, ಪೋಷಕರು ಮಕ್ಕಳಿಗೆ ಶಾಶ್ವತವಾಗಿ ಉಳಿಯುವ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, 400 ಕೋಟಿ ರೂ. ವೆಚ್ಚದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಸಾಗುತ್ತಿರುವ  ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹುಚ್ಚಂಗಿಪುರಕ್ಕೆ ಶುದ್ದ ಕುಡಿಯುವ ನೀರು ಪೂರೈಕೆಯಾಗಲಿದೆ.ತಾಲೂಕಿನಲ್ಲಿ ಬಾಲಕೀಯರ ಪದವಿಪೂರ್ವ ಕಾಲೇಜುಗಳ ಅಗತ್ಯವಿದ್ದು ಮಂಜೂರು ಮಾಡಬೇಕು.ಶಿಥಿಲಾವಾಸ್ಥೆಯಲ್ಲಿರುವ ಶಾಲಾಕಟ್ಟಡಗಳ ದುರಸ್ತಿಗೆ ಸಚಿವರು ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥರು ಮನೆಯ ಮುಂದೆ ಮಕ್ಕಳಿಂದ ಮಲವಿಸರ್ಜನೆ ಮಾಡಿಸದೆ. ನೆರೆಹೊರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್‌ಗಳನ್ನು ನಿಗದಿತ ಜಾಗದಲ್ಲಿ ವಿಲೆವಾರಿಗೊಳಿಸಬೇಕು. ಶ್ರಮದ ಹಣವನ್ನು ಆಸ್ಪತ್ರೆಗೆ ಭರಿಸದೆ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ   ತಿಳಿಸಿದರು.

ಸಂದರ್ಭದಲ್ಲಿ  ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಕೆ.ಎಸ್. ನವೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಜಿ.ಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಎಲ್ ತಿಪ್ಪೇಸ್ವಾಮಿ,ಗ್ರಾ.ಪಂ ಅಧ್ಯಕ್ಷೆ ಗುತ್ಯಮ್ಮ, ಜಿ.ಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಪಿಯು ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಡಯಟ್ ಪ್ರಾಂಶುಪಾಲರಾದ ಗೀತಮ್ಮ, ಎಸ್ ಡಿ ಎಂಸಿ ಅಧ್ಯಕ್ಷ ರುದ್ರೇಶ್, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ತಾ.ಪಂ ಇಓ ಕೆಂಚಪ್ಪ,ಬಿಇಓ ಹಾಲಮೂರ್ತಿ  ಇದ್ದರು.

error: Content is protected !!