ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ : ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ

ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ : ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ನಾಳೆ7ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಗುರುಪೀಠ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ವಾಲ್ಮೀಕಿ ಗುರುಪೀಠ ಸ್ಥಾಪನೆಗೊಂಡು 27 ವರ್ಷ ಪೂರೈಸಿದ್ದು, ಮಠದ ಮೂಲಕ ಸಮಾಜ ಸಂಘಟನೆ ಮತ್ತು ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಜಾಗೃತಿಗೊಳಿಸುವುದಕ್ಕಾಗಿ ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ  ಪ್ರತಿವರ್ಷ ಫೆ.8 ಮತ್ತು 9 ರಂದು ವಾಲ್ಮೀಕಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನರ ಈ ಜಾತ್ರೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದೆ.

ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಆಸಕ್ತಿ ವಹಿಸಿ, ಈ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ಮೇಳವನ್ನು ಏರ್ಪಡಿಸಿರುವುದು ವಿಶೇಷವಾಗಿದೆ.

ಜಾತ್ರೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯ ಕ್ರಮ ಕುರಿತು ವಸ್ತು ಪ್ರದರ್ಶನವನ್ನು ಸಂಘಟಿಸಲಾಗಿದ್ದು, ಜೊತೆಗೆ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.

ಡಿಸಿ, ಎಸ್ಪಿ ಭೇಟಿ : ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಅವರು ಶುಕ್ರವಾರ ಸಂಜೆ ಮಠಕ್ಕೆ ಆಗಮಿಸಿ, ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ವೇದಿಕೆ, ಮಹಾಮಂಟಪ, ಊಟದ ಸ್ಥಳ, ಹೆಲಿಪ್ಯಾಡ್ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಶ್ರೀಗಳ ಜೊತೆ ವೀಕ್ಷಣೆ ಮಾಡಿದ ಡಿಸಿ, ಎಸ್ಪಿ ಅವರು ಸೂಕ್ತ ಬಂದೋಬಸ್ತ್ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನಂತರ ಅಡುಗೆ ಮನೆಯಲ್ಲಿ ಮೂರು ದಿನಗಳ ಮಹಾ ದಾಸೋಹ ಸಿದ್ಧತೆಗೆ ಡಿಸಿ ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಅವರು ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ಈ ಬಾರಿ ಜಾತ್ರೆಯ ವೇದಿಕೆಗೆ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಮತ್ತು ಮಹಾಮಂಟಪಕ್ಕೆ ಶ್ರೀ ಪುಣ್ಯಾನಂದ ಪುರಿ ಶ್ರೀಗಳ ಹೆಸರನ್ನು ಇಡಲಾಗಿದೆ. ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮಠದ ಧರ್ಮದರ್ಶಿಗಳಾದ ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ್, ಹೊಸಪೇಟೆ ಜಂಬಯ್ಯ ನಾಯಕ, ಜಗಳೂರಿನ ಯುವ ಮುಖಂಡ ಎಂ.ಡಿ.
ಕೀರ್ತಿಕುಮಾರ್, ಮಹಿಳಾ ಮುಖಂಡರಾದ ವಿಜಯಶ್ರೀ, ಪಾರ್ವತಿ, ಗೌರಮ್ಮ, ಕೆ.ಬೇವಿನಹಳ್ಳಿ ಹಾಲೇಶ್, ಜಿ.ಆರ್.ನಾಗರಾಜ್, ಪಾಳೇಗಾರ್ ನಾಗರಾಜ್, ರಾಜನಹಳ್ಳಿ ಭೀಮಣ್ಣ, ವಕೀಲ ರಂಗನಾಥ್, ಪತ್ರಕರ್ತ ಪ್ರಕಾಶ್ ಮತ್ತಿತರರು ಈ ವೇಳೆ ಇದ್ದರು.

error: Content is protected !!