ರಾಜಕಾರಣಿಗಳ ಕಿವಿ ಹಿಂಡುವ ಕೆಲಸವಾಗಬೇಕಿದೆ : ವಿಜಯೇಂದ್ರ

ರಾಜಕಾರಣಿಗಳ ಕಿವಿ ಹಿಂಡುವ ಕೆಲಸವಾಗಬೇಕಿದೆ : ವಿಜಯೇಂದ್ರ

ಸಿರಿಗೆರೆ, ಫೆ.6- ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜನರು ಹಾಗೂ ಮಠಾಧೀಶರು ಜನಪ್ರತಿನಿಧಿಗಳ ಕಿವಿ ಹಿಂಡುವ ಕೆಲಸ ವಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಬಿ.ವೈ. ವಿಜಯೇಂದ್ರ ಅಭಿಪ್ರಾಯಿಸಿದರು.

ಅವರು, ಗುರುವಾರ ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸ್ವಾತಂತ್ರ್ಯಾ ನಂತರದಲ್ಲಿ ಜನರು ಯೋಗ್ಯರನ್ನು ಗುರುತಿಸಿ ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸುತ್ತಿದ್ದರು. ಆದರೆ ಇಂದು ರಾಜಕಾರಣಿಗಳು ಜನರಿಗೆ ಆಮಿಷವೊಡ್ಡಿ ಮೋಸ ಮಾಡುತ್ತಿದ್ದಾರೆ. ಇದರಿಂದ ಅಪ್ರಾಮಾಣಿಕರು ಹೆಚ್ಚಾಗುತ್ತಿದ್ದಾರೆ. ರಾಜಕಾರಣಿಗಳಿಗೆ ಹೇಗೆ ಕಿವಿ ಹಿಂಡಬೇಕು ಎಂಬುದನ್ನು ಮತದಾರರು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕರು  ಬರಬೇಕಾದರೆ, ಬಸವಣ್ಣನವರು ಕಂಡ ಸಮ ಸಮಾಜದ ಕನಸು ನನಸಾಗಬೇಕಾದರೆ ಜನರು ಜಾಗೃತರಾಗಬೇಕು ಎಂದರು.

ಕಬಡ್ಡಿ ಕ್ರೀಡೆಯಲ್ಲಿ ಭಾರತೀಯರನ್ನು ಸೋಲಿಸಲು ಬೇರೆ ದೇಶದವರಿಗೆ ಸಾಧ್ಯವಾ ಗಿಲ್ಲ. ಏಕೆಂದರೆ ಅದು ಕಾಲೆಳೆಯುವ ಆಟ. ಹಾಗೆಯೇ ಸಮಾಜದಲ್ಲೂ, ರಾಜಕೀಯ ದಲ್ಲೂ ಕಾಲೆಳೆಯುವವರು ಹೆಚ್ಚಾಗಿದ್ದಾರೆ. ಈ ನಡುವೆಯೂ ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ಯಶಸ್ವಿಯಾಗಿ ಮುನ್ನುಗ್ಗಲು ಸಾಧ್ಯವಿದೆ ಎಂದರು.

ಸಮಾಜ ಹಾಗೂ ರಾಜಕಾರಣ ಸಮುದ್ರ ಮಥನವಿದ್ದಂತೆ. ಸಮುದ್ರ ಮಥನದಲ್ಲಿ ರಾಕ್ಷಸರೂ ಇದ್ದರು, ದೇವತೆಗಳೂ ಇದ್ದರು. ಮಥನದ ಸಂದರ್ಭದಲ್ಲಿ ಒಂದೇ ಬಾರಿ ಅಮೃತ ಸಿಗಲಿಲ್ಲ.   ಹಾಲಾಹಲವನ್ನೂ ಕುಡಿಯಬೇಕಾಯಿತು. ಇದನ್ನು ರಾಜಕಾರ ಣಿಗಳೂ ನೆನಪಿಟ್ಟುಕೊಳ್ಳಬೇಕು. ಸಮಾಜದ ಹಿತದೃಷ್ಟಿಯಿಂದ ಕಷ್ಟಕಾರ್ಪಣ್ಯಗಳನ್ನೂ ನುಂಗಿಕೊಳ್ಳಬೇಕು ಎಂದು ಹೇಳಿದರು.

ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜಕಾರಣ ಹಿಂದೆ ಸೇವೆಯಾಗಿತ್ತು. ಈಗ ಅಧಿಕಾರವಾಗಿದೆ. ಸಮಾಜದಲ್ಲಿ ಒಳ್ಳೆಯ ಬದುಕು ಬದುಕಬೇಕಾದರೆ ಮಾನ, ಮರ್ಯಾದೆ ಮುಖ್ಯವಾಗಿತ್ತು. ಈಗ ಅಧಿಕಾರ, ಆಸ್ತಿ ಹಣ ಮುಖ್ಯವಾಗಿದೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಸರ್ವಜ್ಞನ ವಚನವನ್ನು ಈಗ ಕೋಟಿ ವಿದ್ಯೆಗಳಲ್ಲಿ ಲೂಟಿ ವಿದ್ಯೆಯೇ ಮೇಲು ಎನ್ನುವಂತಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವ ರಾಜಕಾರಣವೇ ಬೇರೆ, ನಂತರದ ರಾಜಕಾರಣವೇ ಬೇರೆ. ಹಿಂದುತ್ವವನ್ನು ಅರ್ಥಮಾಡಿಕೊಳ್ಳದ ಸರ್ಕಾರ, ಹಿಂದುತ್ವದ ಉಳಿಸಿ ಎನ್ನುತ್ತಿದೆ. ಸಂವಿಧಾನವನ್ನೇ ಓದಿಕೊಳ್ಳದ ಪಕ್ಷ ಸಂವಿಧಾನ ಉಳಿಸಿ ಎನ್ನುತ್ತಿದೆ. ಮತ್ತೊಂದು ಪಕ್ಷ ಕುಟುಂಬಕ್ಕಾಗಿ ನಮ್ಮ ಪಕ್ಷ ಉಳಿಸಿ ಎನ್ನುತ್ತಿದೆ ಎಂದರು.

ಹಿಂದೆ ಹಣ ಕೊಟ್ಟು, ಊಟ ಕೊಟ್ಟು ಗೆಲ್ಲಿಸುತ್ತಿದ್ದರು. ಆದರೆ ಇಂದು ಹಂಡೆ ಹಂಡೆಯಲ್ಲಿ ಹಣ ಮಾಡಿ, ಕಿಂಡಿ ಕಿಂಡಿಯಲ್ಲಿ ಹಣ ಹಂಚುತ್ತಿದ್ದಾರೆ. ಸಮಾಜ ಹಾಗೂ ರಾಜಕಾರಣ ಎರಡೂ ಕಲುಷಿತಗೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಜನರು ಎತ್ತೆಚ್ಚುತೊಳ್ಳಬೇಕಿದೆ. ಕಡ್ಡಾಯ ಮತದಾನ ಮಾಡಿ, ಯೋಗ್ಯರನ್ನು ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.

ಬಿಳಿಚೋಡು ಬಸವೇಶ್ವರ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಭೂಮಿಕಾ, ದೀಪಿಕಾ ಕುಂದಗೋಡು ವಚನ ಗೀತೆ ಹಾಡಿದರು. ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಚನ ನೃತ್ಯ ನಡೆಸಿಕೊಟ್ಟರೆ, ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಲಂಬಾಣಿ ನತ್, ತರಳಬಾಳು ಕಲಾ ಸಂಘದವರು ಭರತನಾಟ್ಯ ಹಾಗೂ ಡಿವಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಕುರುಡು ಕಾಂಚಾಣ ಜಾನಪದ ನೃತ್ಯ ಪ್ರದರ್ಶಿಸಿದರು.

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚಿತ್ರದುರ್ಗ ಲೋಕಸಭಾ ಸದಸ್ಯ  ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕರುಗಳಾದ ಬಿ.ಜಿ. ಗೋವಿಂದಪ್ಪ, ವೀರೇಂದ್ರ ಪಪ್ಪಿ,  ಹೆಚ್.ಕೆ. ಸುರೇಶ್, ಕೆ.ಎಸ್. ಬಸವಂತಪ್ಪ, ಪ್ರಕಾಶ್ ಕೋಳಿವಾಡ, ಬಿ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಿಮಿಕ್ರಿ ಗೋಪಿ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!