ಹರಿಹರ,ಫೆ.5- ಮೊನ್ನೆ ನಿಧನರಾದ ಬಂಡಾಯ ಸಾಹಿತಿ ಜೆ.ಕಲೀಂ ಬಾಷ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಮತ್ತು ಪರಸ್ಪರ ಬಳಗದಿಂದ ವತಿಯಿಂದ ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಕಲೀಂ ಬಾಷಾ ಅವರ ಸೇವೆಯ ಗುಣಗಾನ ಮಾಡಿದರು. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಕವನಗಳ ರಚನೆ ಮಾಡುತ್ತಿದ್ದ ಬಾಷಾ ಅವರು ನಿವೃತ್ತಿ ನಂತರ ‘ಶಾಹೀನಾ ಮತ್ತು ಇತರ ಕವಿತೆಗಳು’, ‘ಗುಜರಾತಿನಲ್ಲಿ ಗಾಂಧಿ ಆತ್ಮ’, ‘ಮನೆಯಲ್ಲಿ ಬೆಳದಿಂಗಳು’, ‘ಕಾಡ್ತಾವ ಮನದಾಗ’, ‘ಖುರಾನಿನ ಆಯ್ದ ಸೂಕ್ತಿಗಳು’ ಎಂಬ ಐದು ಕೃತಿಗಳನ್ನು ರಚಿಸಿದ್ದರು.
ಕವಿ ಅಶ್ಫಾಖ್ ಉಲ್ಲಾ ಖಾನ್ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್ ಎಂಬುವರ ಕೃತಿಗಳನ್ನು ಹಿಂದಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಲು ಉತ್ತರ ಭಾರತದಲ್ಲಿನ ಈ ಇಬ್ಬರು ಕವಿಗಳ ಊರಿಗೆ ಹೋಗಿ ಅವರ ವಂಶಸ್ಥರಿಂದ ಮಾಹಿತಿ ಸಂಗ್ರಹಿಸಿದ್ದರು ಎಂದು ಸ್ಮರಿಸಿದರು.
ಹರಿಹರದ ತುಂಗಭದ್ರ ಹಳೇ ಸೇತುವೆ ಜೀರ್ಣೋದ್ಧಾರ, ಜಿಬಿಎಂಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನ ಉಳಿಸಲು ಸೇರಿದಂತೆ ಹಲವಾರು ಹೋರಾಟ, ಪ್ರತಿಭಟನೆಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಂಡಿದ್ದರು. ನಿಷ್ಠುರ ಸ್ವಭಾವದ ಅವರು ನಿಜ ಅರ್ಥದಲ್ಲಿ ಕನ್ನಡದ ಕಟ್ಟಾಳು ಆಗಿದ್ದರು ಎಂದು ಸ್ಮರಿಸಲಾಯಿತು.
ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಪ್ರೊ.ಸಿ.ವಿ.ಪಾಟೀಲ್, ಪ್ರೊ.ಎಚ್.ಎ.ಭಿಕ್ಷಾವರ್ತಿ ಮಠ, ಡಿ.ಎಂ.ಮಂಜುನಾಥಯ್ಯ, ಎಚ್.ನಿಜಗುಣ, ಎಚ್.ಕೆ.ಕೊಟ್ರಪ್ಪ, ಎಸ್.ಎಚ್.ಹೂಗಾರ್, ರೇವಣಸಿದ್ದಪ್ಪ ಅಂಗಡಿ, ಎ.ರಿಯಾಜ್ ಅಹ್ಮದ್, ಚಿದಾನಂದ ಕಂಚಿಕೇರಿ, ಬಿ.ಬಿ.ರೇವಣ್ಣ ನಾಯ್ಕ್, ವಿ.ಬಿ.ಕೊಟ್ರೇಶಪ್ಪ, ನ್ಯಾಯವಾದಿ ಅನೀಸ್ ಪಾಷಾ, ಸೈಯದ್ ಅಜೀಜ್ ಉರ್ ರಹಮಾನ್, ವೈ.ಕೃಷ್ಣಮೂರ್ತಿ, ಟಿ.ಜೆ.ಮುರುಗೇಶಪ್ಪ, ಮಲ್ಲಿಕಾರ್ಜುನ್, ಪ್ರೊ.ಎಸ್.ಎಚ್.ಪ್ಯಾಟಿ, ಎನ್.ರುದ್ರಮುನಿ, ಕೆ.ಬಿ.ರಾಜಶೇಖರ್, ಸ್ಯಾಮ್ಸನ್, ವೈದ್ಯ ಜಗನ್ನಾಥ್, ಎಂ.ವಿ.ಹೊರಕೇರಿ, ಪರಮೇಶ್ವರ ಕತ್ತಿಗೆ, ಹುಲಿಕಟ್ಟೆ ಚನ್ನಬಸಪ್ಪ, ಎನ್.ಇ.ಸುರೇಶ್ಸ್ವಾಮಿ ಈ ಸಂದರ್ಭದಲ್ಲಿ ಇದ್ದರು.