ಶರಣ ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್
ಹರಿಹರ, ಫೆ.4- ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಮಡಿವಾಳ ಬಂಧುಗಳು ತಮ್ಮ ಕಾಯಕದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಇವರೆಲ್ಲಾ ಮುಖ್ಯ ವಾಹಿನಿಗೆ ಬರದಿರಲು ಆರ್ಥಿಕ ಸಂಕಷ್ಠವೇ ಮೂಲ ಕಾರಣವಾಗಿದೆ ಶಾಸಕ ಬಿ.ಪಿ.ಹರೀಶ್ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ, ನಗರಸಭೆ, ತಾಲ್ಲೂಕು ವೀರ ಗಂಟಿ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ, ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮೀತಿ ವತಿಯಿಂದ ಶನಿವಾರ ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶರಣ ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತರೆ ಸಮಾಜಗಳಂತೆ ಅಭಿವೃದ್ಧಿ ಹೊಂದಲು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮರೆಯಬಾರದು. ಮುಂದಿನ ದಿನಮಾನಗಳಲ್ಲಿ ಮಡಿವಾಳ ಮುಖಂಡರು ಹಾಗೂ ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಸರ್ಕಾರಕ್ಕೆ ವರದಿ ನೀಡಲಾಗು ವುದೆಂದು ಶಾಸಕರು ಮಡಿವಾಳ ಸಮಾಜಕ್ಕೆ ಭರವಸೆ ನೀಡಿದರು.
ನೂರಾರು ವರ್ಷಗಳಿಂದ ಮಡಿವಾಳ ಸಮಾಜದವರು ತಮ್ಮ ಕಾಯಕದಿಂದಲೇ ಜೀವನ ಸಾಗಿಸುತ್ತಾ ಬಂದಿದ್ದಾರೆ. ಬಡ ಹಾಗೂ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದ ಸೌಲಭ್ಯಗಳಿಗಾಗಿ ಕಾಯುತ್ತಿದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಕಾಯ್ದಿರಿಸಿರುವ ಅನುದಾನ ನಮ್ಮ ಸಮಾಜದವರಿಗೆ ನಿರೀಕ್ಷಿಸಿದಷ್ಟು ಸಿಗುತ್ತಿಲ್ಲವೆಂದು, ಮಡಿವಾಳ ಸಮಾಜದವರು ತಿಳಿಸಿದ್ದಾರೆ ಎಂದು ಹೇಳಿದರು.
11ನೇ ಶತಮಾನದಲ್ಲಿ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದರಲ್ಲದೆ. ನಾಡಿನ ಎಲ್ಲಾ ಶರಣರಿಗೆ ಅಚ್ಚುಮೆಚ್ಚಿನ ಸೇವಕರಾಗಿದ್ದರು. ಶರಣರ ಬಟ್ಟೆಗಳನ್ನು ಮಡಿ ಮಾಡಿಕೊಂಡು ಬರುವಾಗ ವೀರ ಗಂಟೆಯನ್ನು ಭಾರಿಸುತ್ತಾ ಶರಣರ ಮನೆಗೆ ತೆರಳಿ ಅವರ ಮಡಿ ಬಟ್ಟೆಗಳನ್ನು ಅವರಿಗೊಪ್ಪಿಸುವ ಕಾಯಕ ನಿಷ್ಠೆ ಯಿಂದಲೇ ವೀರಗಂಟಿ ಮಡಿವಾಳ ಮಾಚಿದೇವ ರೆಂದು ಖ್ಯಾತಿ ಪಡೆದಿದ್ದರು ಎಂದು ಹೇಳಿದರು.
ಮನುಕುಲಕ್ಕೆ ಅಕ್ಷರ ಜ್ಞಾನವಿಲ್ಲದ ಅಂದಿನ ದಿನಮಾನಗಳಲ್ಲಿ ತಮ್ಮ ಕಾಯಕ ನಿಷ್ಠೆ, ವಚನ ಸಾಹಿತ್ಯದ ಮೂಲಕ ಅಜ್ಞಾನದ ಅಂಧಕಾರದಿಂದ ಸುಜ್ಞಾನದೆಡೆಗೆ ಎಲ್ಲರ ಮನಸ್ಸು ಹರಿಯುವಂತೆ ಮಾಡಿದ ಜ್ಞಾನವಂತರಾಗಿದ್ದರು ಮಾಚಿದೇವರು.
ತಹಶೀಲ್ದಾರ್ ಕೆ.ಎಂ. ಗುರುಬಸವರಾಜ, ವೀರಗಂಟೆ ಮಡಿವಾಳ ಮಾಚಿದೇವ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷ ಭೀಮಣ್ಣ ಹೆಚ್.ಬಿ, ಉಪಾಧ್ಯಕ್ಷರುಗಳಾದ ಮಲ್ಲೇಶಪ್ಪ ಕುಣೆಬೆಳಕೇರಿ, ಈಶ್ವರಪ್ಪ, ಕಾರ್ಯದರ್ಶಿ ರಂಗನಾಥ ಕೊಮಾರನಹಳ್ಳಿ, ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಪ್ಪ ಗುತ್ತೂರು ಮಾತನಾಡಿದರು.
ಮುಖಂಡರುಗಳಾದ ರವಿಯಣ್ಣ, ಚಿಂತಾಮಣಿ, ಉಮೇಶ್, ಕೆಂಚಪ್ಪ ನಂದಿಗಾವಿ, ಚಂದ್ರು, ಪುಲಕೇಶಿ, ಗೋಪಿ ಗುತ್ತೂರು, ಕಾಂಗ್ರೆಸ್ ಮುಖಂಡ ನಂದಿಗಾವಿ ಸತೀಶ್, ಗಂಗಾಮತ ಸಮಾಜದ ಅಧ್ಯಕ್ಷ ಕೆಂಚನಹಳ್ಳಿ ಮಹಾಂತೇಶ್, ಕುರುಬ ಸಮಾಜದ ಅಧ್ಯಕ್ಷ ಕೆ.ಬಿ. ರಾಜಶೇಖರ್, ಯಾದವ ಸಮಾಜದ ಅಧ್ಯಕ್ಷ ಚಿಕ್ಕಬಿದರಿ ಬಸಣ್ಣ, ಬಲಿಜ ಸಮಾಜದ ಕಾರ್ಯದರ್ಶಿ ಚಂದ್ರಣ್ಣ, ಹೆಚ್.ಕೆ. ಕೊಟ್ರಪ್ಪ, ಟಿ.ಹೆಚ್.ಓ. ಅಬ್ದುಲ್ ಖಾದರ್, ತೋಟಗಾರಿಕೆ ಅಧಿಕಾರಿ ಶಶಿಧರ್, ನಗರಸಭೆ ಅಭಿಯಂತರರಾದ ವಿನಯಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರನಗೌಡ, ಪಶುಪಾಲನಾ ಹಾಗೂ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಸ್ಮಾಭಾನು ಮತ್ತು ಇತರರು ಭಾಗವಹಿಸಿದ್ದರು.