ದಾವಣಗೆರೆ, ಫೆ.4- ನಗರದ ಜಿಎಂ ವಿಶ್ವವಿದ್ಯಾಲಯ ಹಾಗೂ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ನಿರೋಧಕತೆ ಮತ್ತು ಬೆಂಬಲ ಕುರಿತ ಕಾಲ್ನಡಿಗೆಯ ಜಾಗೃತಿ ಜಾಥಾ ನಡೆಯಿತು.
`ಜಾಗೃತಿಯೇ ಶಕ್ತಿ ಕ್ಯಾನ್ಸರ್ ನಿಂದ ಮುಕ್ತಿ, ಧೂಮಪಾನ ಮಾಡದಿರು ಯಮನ ಕೋಣ ಹತ್ತದಿರು, ಕ್ಯಾನ್ಸರ್ ಬಗ್ಗೆ ಜಾಗೃತಿ ಇರಲಿ, ಕ್ಯಾನ್ಸರ್ ದೂರ ಆರೋಗ್ಯ ಹತ್ತಿರ, ಕ್ಯಾನ್ಸರ್ ತಿಳಿವು ಮುಂಚಿತ ಇಲ್ಲ ಸಾವು ಖಚಿತ’ ಎಂಬಿತ್ಯಾದಿ ಕ್ಯಾನ್ಸರ್ ಜಾಗೃತಿ ಕುರಿತ ಜಿಎಂ ಗ್ರೂಪ್ ನ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳ ಘೋಷ ವ್ಯಾಕ್ಯಗಳು ಜಾಥಾದುದ್ದಕ್ಕೂ ಮೊಳಗಿದವು.
ಈ ವರ್ಷದ ವಿಷಯ `ವಿಶಿಷ್ಟತೆಯ ಮೂಲಕ ಒಗ್ಗಟ್ಟಾಗಿ’ ಎಂಬುದನ್ನು ಪ್ರಮುಖವಾಗಿ ಮಂಡಿಸಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸಂಸ್ಥೆಗಳ ಪ್ರತಿನಿಧಿಗಳು ಸಾಥ್ ನೀಡಿದ್ದರು.
ಜಾಥಾವು ಮೋತಿ ವೀರಪ್ಪ ಶಾಲೆಯ ಮೈದಾ ನದಿಂದ ಪ್ರಾರಂಭವಾಗಿ ಜಯದೇವ ವೃತ್ತದವ ರೆಗೂ ಸಾಗಿತು. ಅಲ್ಲಿ ಬಹಿರಂಗ ಸಭೆ ನಡೆಸಿ, ಕ್ಯಾನ್ಸರ್ ಬಗ್ಗೆ ಜಾಗೃತಿ ವಹಿಸುವಂತೆ ಅರಿವು ಮೂಡಿಸಿ ಜಾಥಾ ಮುಕ್ತಾಯಗೊಳಿಸಲಾಯಿತು.
ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಹೆಚ್.ಡಿ. ಮಹೇಶಪ್ಪ ಮಾತನಾಡಿ, ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೇ, ಜಾಗೃತಿ ಕೊರತೆಯೇ ಇದಕ್ಕೆ ಕಾರಣವಾಗಿದೆ. ಅದನ್ನು ನಿವಾರಿಸಲು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ ಅವಶ್ಯಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಪ್ರಸ್ತಾಪಿಸಿದರು.
ಕ್ಯಾನ್ಸರ್ ಹೋರಾಟ ಗಾರ ಆರ್.ಟಿ. ಅರುಣ್ ಕುಮಾರ್ ಅವರು ತಮ್ಮ ಅನುಭವ ಹಂಚಿಕೊಂಡು, ಕ್ಯಾನ್ಸರ್ ನಿಂದ ತಯಾರಾ ಗುವ ಮನೋ ವೈದ್ಯಕೀಯ ಬೆಂಬಲ ಹಾಗೂ ತಂತ್ರ ಜ್ಞಾನದ ಬಳಕೆಯಿಂದ ಹೇಗೆ ಅವರು ಯಶಸ್ವಿ ಯಾಗಿ ಈ ಭೀಕರ ರೋಗವನ್ನು ಗೆದ್ದಿದ್ದಾರೆ ಎಂಬುದನ್ನು ತಿಳಿಸಿದರು.
ಜಿಎಂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನಿಲ್ ಕುಮಾರ್, ವ್ಯವಸ್ಥಾಪಕ ಪ್ರತಿನಿಧಿ ಡಾ. ವೈ.ಯು. ಸುಭಾಷ್ ಚಂದ್ರ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಡಾ. ಅಜಯ್ ಮತ್ತು ಡಾ. ಅಮಿತ್, ಕಾರ್ಯಕ್ರಮದ ಸಂಯೋಜಕರಾದ ಡಾ. ನಿರ್ಮಲ್ ಟಿ.ಹೆಚ್., ಕೇಶವ ಕೆ.ಎಸ್., ಮೊಹಮ್ಮದ್ ಯೂಸುಫ್ ಎಂ.ಡಿ., ರಾಕೇಶ್ ಎಸ್. ಹಾಗೂ ಡಾ. ಮೊಹಮ್ಮದ್ ಯಾಸೀನ್, ರೋಟರಿ ಕ್ಲಬ್ ಸದಸ್ಯರು, ಮಾದಕ ದ್ರವ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ವೈದ್ಯಕೀಯ ವೃತ್ತಿಪರರು ಕೂಡ ಭಾಗವಹಿಸಿದ್ದರು.