ನೀರು ಕಾಯಿಸುವ ಬಾಯ್ಲರ್ ಬಿದ್ದು ವಿದ್ಯಾರ್ಥಿಯ ಸಾವು

ನೀರು ಕಾಯಿಸುವ ಬಾಯ್ಲರ್ ಬಿದ್ದು ವಿದ್ಯಾರ್ಥಿಯ ಸಾವು

ದಾವಣಗೆರೆ, ಫೆ.4- ನೀರು ಕಾಯಿಸುವ ಬಾಯ್ಲರ್‌ಗೆ ಉರಿ ಹಾಕುತ್ತಿರುವಾಗ ಶಿಥಿಲಗೊಂಡಿದ್ದ ಬಾಯ್ಲರ್ ಇದ್ದಕ್ಕಿದ್ದಂತೆ ಮೈಮೇಲೆ ಬಿದ್ದು ವಿದ್ಯಾರ್ಥಿಯೋರ್ವ ಹಾಸ್ಟೆಲ್‌ನಲ್ಲಿ ಸಾವಿಗೀಡಾಗಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥ ವಸತಿಯುತ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, 5ನೇ ತರಗತಿ ವಿದ್ಯಾರ್ಥಿ ಕೆ.ಆರ್.ರಂಗಸ್ವಾಮಿ (11) ಮೃತಪಟ್ಟ ವಿದ್ಯಾರ್ಥಿ.

ಮೃತ ವಿದ್ಯಾರ್ಥಿ ರಂಗಸ್ವಾಮಿ, ಜಿಗಳಿ ಗ್ರಾಮದ ಕೆ.ಆರ್.ರಾಮಪ್ಪ ಇವರ ಏಕೈಕ ಪುತ್ರನಾಗಿದ್ದು, ಮೃತ ಬಾಲಕನ ತಂದೆ-ತಾಯಿ ಮತ್ತು ಕುಟುಂಬದವರ – ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲೆಯ ಮುಖ್ಯ ಶಿಕ್ಷಕ, ಹಾಸ್ಟೆಲ್ ವಾರ್ಡನ್ ಮತ್ತು ಆಡಳಿತ ಮಂಡಳಿಯವರ ನಿರ್ಲಕ್ಷ್ಯದಿಂದಾಗಿ ನಮ್ಮ ಮಗ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆಂದು ಮೃತ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿ ಮೇಲೆ ಬಾಯ್ಲರ್ ಬಿದ್ದು ಅಸ್ವಸ್ಥಗೊಂಡಿದ್ದರೂ ಸಹ ಶಾಲೆಯ ಶಿಕ್ಷಕರಾಗಲೀ ಅಥವಾ ಹಾಸ್ಟೆಲ್ ವಾರ್ಡನ್ ಆಗಲೀ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ನಮ್ಮ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಸಿಜಿ ಆಸ್ಪತ್ರೆಯ ಶವಾಗಾರದಲ್ಲಿರುವ ಮೃತ ವಿದ್ಯಾರ್ಥಿಯ ಪಾರ್ಥಿವ ಶರೀರವನ್ನ ಬುಧವಾರ ಬೆಳಿಗ್ಗೆ ಶವ ಪರೀಕ್ಷೆ ನಂತರ ಸ್ವಗ್ರಾಮ ಜಿಗಳಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳ ತಿಳಿಸಿವೆ.

error: Content is protected !!