ಕ್ಯಾನ್ಸರ್ ಕುರಿತ ಜನಜಾಗೃತಿ ಜಾಥಾದಲ್ಲಿ ಡಾ.ಅಮಿತ್
ದಾವಣಗೆರೆ, ಫೆ.2- ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ, ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಎಸ್.ಎಸ್.ಕೇರ್ ಟ್ರಸ್ಟ್, ಬಾಪೂಜಿ ಎಜುಕೇಷನಲ್ ಅಸೋಸಿಯಷನ್ ಸಹಯೋಗ ದೊಂದಿಗೆ ಭಾನುವಾರ ಇಲ್ಲಿನ ಗುಂಡಿ ವೃತ್ತದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಡಾ.ಅಮಿತ್ ಮಾತನಾಡಿ, ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಆರಂಭದ ಹಂತದಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮುಂದಾಗುವ ಅನಾಹುತವನ್ನು ತಡೆಯಲು ಸಾಧ್ಯ ಎಂದರು.
ಮೊದಲು ಭಾರತ ಬಡ ದೇಶ ಎಂದು ಹೇಳುತ್ತಿದ್ದರು. ಈಗ ಅಂಕಿ-ಅಂಶ ಬದಲಾಗುತ್ತಿದೆ. ಈಗ ನಮ್ಮ ದೇಶದಲ್ಲಿ ಬಡ ಜನರಿಗಿಂತ ಕ್ಯಾನ್ಸರ್ ಪೀಡಿತರು ಬಹಳ ಆಗುತ್ತಿದ್ದಾರೆ. ಕ್ಯಾನ್ಸರ್ ಮೊಳಕೆಯಲ್ಲಿದ್ದಾಗಲೇ ಚಿವುಟಿ ಹಾಕಿ ಅದು ಹೆಮ್ಮರವಾಗಿ ಬೆಳೆಯದಂತೆ ತಡೆಗಟ್ಟಬಹುದಾಗಿದೆ ಎಂದರು.
ಕ್ಯಾನ್ಸರ್ ಗುಣಪಡಿಸಬಹುದಾದ, ಉನ್ನತ ಮಟ್ಟದ ಔಷಧೋಪಚಾರ, ಆಧುನಿಕ ಚಿಕಿತ್ಸಾ ವಿಧಾನಗಳು ಬಂದಿವೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಹೆದರದೆ, ತಡ ಮಾಡದೇ ವೈದ್ಯರಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಹೇಳಿದರು.
ವಿಶ್ವಾರಾಧ್ಯ ಆಸ್ಪತ್ರೆಯ ನಿರ್ದೇಶಕ ಡಾ. ಜಗದೀಶ್ ತುಬಚಿ ಮಾತನಾಡಿ, ಜನರು ಚಿಕಿತ್ಸೆಗಾಗಿ ದೊಡ್ಡ ನಗರಗಳನ್ನು ಅವಲಂಬಿಸಬೇಕಿಲ್ಲ. ದಾವಣಗೆರೆಯಲ್ಲೂ ಉತ್ತಮ ಚಿಕಿತ್ಸೆಗಳು ಲಭ್ಯವಿವೆ ಎಂದರು.
ಜಿಲ್ಲೆಯ ಕ್ಯಾನ್ಸರ್ ರಾಯಭಾರಿ ಆರ್.ಟಿ.ಅರುಣಕುಮಾರ್ ಮಾತನಾಡಿ, ನಾನು ಕ್ಯಾನ್ಸರ್ ಗೆದ್ದು 15 ವರ್ಷಗಳಾಗಿದೆ. ಇದಕ್ಕೆಲ್ಲಾ ವೈದ್ಯರೇ ಕಾರಣ. ಈ ಬಾರಿಯ ಥೀಮ್ ಕೂಡಾ “ಅನನ್ಯತೆಯಿಂದ ಒಂದುಗೂಡಿಕೆ”. ನಾವು ನಿಮ್ಮೊಂದಿಗೆ ಇದ್ದೇವೆ. ಕ್ಯಾನ್ಸರ್ ಭಯ ಬೇಡ ಎಂಬ ವೈದ್ಯರ ಸಲಹೆಯಂತೆ ಇಂತಹ ಒಂದು ಅಧ್ಯಾಯವನ್ನು ದಾಟಿಕೊಂಡು ನಾನು ಬಂದಿದ್ದೇನೆ. ನಮ್ಮ ಗುರಿ ಕ್ಯಾನ್ಸರ್ ಮುಕ್ತ ಭಾರತವಾಗಬೇಕು. ತಂಬಾಕು ಮುಕ್ತ ಜೀವನ ಉತ್ತಮ ಆರೋಗ್ಯ ನೀಡಲಿದೆ ಎಂದರು.
ಎಲ್ಲರಲ್ಲೂ ಜಾಗೃತಿ ಎಂಬುದು ಮುಖ್ಯ. ಕ್ಯಾನ್ಸರ್ ಎಂದಾಕ್ಷಣ ಭಯಕ್ಕೆ ಜಾರುವುದು ಬೇಡ. ಇದನ್ನು ಧೈರ್ಯವಾಗಿ ಎದುರಿಸಿ, ಇತರ ಜನರಲ್ಲೂ ಧೈರ್ಯ ಮೂಡಿಸಬೇಕಿದೆ ಎಂದು ಹೇಳಿದರು.
ಡಿಎಚ್ಒ ಡಾ.ಷಣ್ಮುಖಪ್ಪ, ಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಸಾದ್, ಡಾ.ಜಗದೀಶ್, ಡಾ.ಮೂಗನ ಗೌಡ, ಡಾ.ಲತಾ, ಡಾ.ಬಿ.ಎಸ್. ನಾಗಪ್ರಕಾಶ್, ಡಾ. ಧನ್ಯಕುಮಾರ್, ಡಾ.ಅಜಯ್, ಡಾ.ಮಹಾಂತೇಶ್, ಜಿ.ಆರ್. ಸಂತೋಷ್ ಕುಮಾರ್, ಡಾ.ಸುನಿಲ್ ಬ್ಯಾಡಗಿ ಇತರರು ಇದ್ದರು. ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.