ಹರಿಹರ, ಜ.31- ಶೀಘ್ರದಲ್ಲಿಯೇ ಮಹತ್ವದ ಸಭೆಯನ್ನು ಏರ್ಪಡಿಸಿ ಆ ಮೂಲಕ ಹರಿಹರ ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ನಗರಸಭೆಯ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂತ ಸೇವಾಲಾಲ್ ಜಯಂತಿ ಮತ್ತು ವಾಲ್ಮೀಕಿ ಜಾತ್ರೆಯ ನಂತರದಲ್ಲಿ ಸಭೆ ಕರೆಯುವುದಾಗಿ ತಿಳಿಸಿದರು.
ಸಾರ್ವಜನಿಕರ ಸಮಸ್ಯೆಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಆರೋಪ – ಪ್ರತ್ಯಾರೋಪ ಮಾಡುತ್ತಾ ಹೋದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಬದಲಿಗೆ, ಮನಸ್ತಾಪಗಳಿಗೆ ಎಡೆ ಮಾಡಿಕೊಡುತ್ತವೆ. ಆದ್ದರಿಂದ ಪರಿಹಾರ ಸಿಗುವ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ನಗರಸಭೆಗೆ ಹಿಂದಿನ ಅನುದಾನ ಪುನಃ ಬಂದಿರುವ 8 ಕೋಟಿ ರೂಪಾಯಿ ಹಣವನ್ನು ಸದ್ಬಳಕೆ ಮಾಡುವುದಕ್ಕೆ, ಗುತ್ತಿಗೆದಾರರು ಹಳೆಯ ಟೆಂಡರ್ ನಿಬಂಧನೆಗಳ ಪ್ರಕ್ರಿಯೆ ಪ್ರಕಾರ ಕಾಮಗಾರಿ ಮಾಡಲಿಕ್ಕೆ ಮುಂದೆ ಬಂದರೆ, ತಕ್ಷಣವೇ ಅವರಿಗೆ ಕಾಮಗಾರಿ ಆದೇಶ ನೀಡಲಾಗುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಈ ಕೂಡಲೇ ನಗರಸಭೆ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ, ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮುಂದಾದರೆ, ಇಲ್ಲಿನ ಜನತೆಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ಮುಂಬರುವ ದಿನಗಳಲ್ಲಿ ಹರಿಹರೇಶ್ವರ ಸ್ವಾಮಿ ರಥೋತ್ಸವ ಮತ್ತು ಊರಮ್ಮ ದೇವಿ ಹಬ್ಬ ಇರುವುದರಿಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಬಸವಂತಪ್ಪ, ಮಾರುತಿ ಬೇಡರ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಅಧಿಕಾರಿ ಮಹಾಂತೇಶ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ತಹಶೀಲ್ದಾರ್ ಗುರುಬಸವರಾಜ್, ನಗರಸಭೆ ಎಇಇ ವಿನಯ್ ಕುಮಾರ್, ನಗರಸಭೆ ಮ್ಯಾನೇಜರ್ ನಿರಂಜನಿ, ಇಂಜಿನಿಯರ್ ಪ್ರಕಾಶ್ ಇತರರು ಹಾಜರಿದ್ದರು.