ದುರ್ವಾಸನೆಗೆ ಜನ ಹೈರಾಣ, ಹಳೇ ಊರಿನಲ್ಲಿ ಸ್ವಚ್ಛತೆ ಮರೀಚಿಕೆ, ಬೀದಿ ನಾಯಿಗಳ ಹಾವಳಿ
ಬಿ. ಸಿಕಂದರ್
ದಾವಣಗೆರೆ, ಜ.31- ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್ ಸಾಬ್ ಅವರ ನಗರವನ್ನು ಕಸಮುಕ್ತ ನಗರವನ್ನಾಗಿಸಿ ಸ್ಮಾರ್ಟ್ ಸಿಟಿ ಮಾಡುವ ಪ್ರಯತ್ನ ಒಂದೆಡೆಯಾದರೆ, ಮತ್ತೊಂದೆಡೆ ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಕಸ ತುಂಬಿರುವ ರಾಶಿ-ರಾಶಿ ಚೀಲಗಳ ಗಂಟು, ಇದರ ನಡುವೆ ನಾಯಿಗಳ ಹಾವಳಿ ಮತ್ತು ದುರ್ವಾಸನೆಯಿಂದಾಗಿ ಪಾದಚಾರಿಗಳು ಮೂಗು ಮುಚ್ಚಿಕೊಂಡು, ಕಣ್ಣಿದ್ದು ಕುರುಡರಂತೆ ಸಾಗುವ ದೃಶ್ಯ ದಕ್ಷಿಣ ಕ್ಷೇತ್ರದ ಹಳೇ ಭಾಗಗಳಲ್ಲಿ ಸಾಮಾನ್ಯವಾಗಿವೆ.
ಹೌದು, ಬೇತೂರು ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ (ವಡ್ಡರ ಕೇರಿ) ಬಿದ್ದಿರುವ ಈ ಕಸದ ರಾಶಿ ಈ ಭಾಗದ ಜನರಿಗೆ ತಲೆಗೆ ನೋವುಂಟು ಮಾಡಿದ್ದಲ್ಲದೇ, ಗಾಳಿ ಬೀಸಿದಾಗ ಕಸ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಹರಡುತ್ತದೆ.
ಶಾಲೆಯ ಗೋಡೆಗೆ ಮೂತ್ರವಿಸರ್ಜನೆ ಮಾಡುವ ನಾಗರಿಕರಿಕರ ವರ್ತನೆಯಿಂದಾಗಿ ಶಾಲೆಯ ಸಿಬ್ಬಂದಿಗೆ ಮುಜುಗರ ಉಂಟು ಮಾಡಿದ್ದು, ಆ ದಾರಿಯಲ್ಲಿ ಸಾಗುವ ಮಹಿಳೆಯರಿಗೆ, ಶಾಲೆಯ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ ಕಿರಿ-ಕಿರಿಯಾಗಿ ಪರಿಣಮಿಸುತ್ತಿದೆ ಎಂದು ಸಮಸ್ಯೆಯ ಬಗ್ಗೆ ಸ್ಥಳೀಯ ಹಿರಿಯ ನಾಗರಿಕ ದಾದಾಪೀರ್ ವಿವರಿಸಿದರು.
ಉತ್ತಮ ಪರಿಸರ ಇದ್ದರೆ ಮಾತ್ರ ಸದೃಢ ಆರೋಗ್ಯ ಹೊಂದಬಹುದು ಎನ್ನುವ ಆಟೋ ಚಾಲಕ ಮುನ್ನಾ ಅವರು, ಅಭಿವೃದ್ಧಿ ಕಾರ್ಯಗಳು ಈ ಭಾಗದ ಕೆಲವು ಪ್ರದೇಶಗಳಲ್ಲಿ ಮರಿಚೀಕೆಯಾಗಿವೆ ಎಂದ ಅವರು, `ಸ್ಮಾರ್ಟ್ ಸಿಟಿ ಓಕೆ, ಆದ್ರೆ ಕ್ಲೀನ್ ಸಿಟಿ’ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
ನರಸರಾಜ ಪೇಟೆ ನೀರಿನ ಟ್ಯಾಂಕ್ ಆವರಣದಲ್ಲಿ ಉದ್ಯಾನವನ ಹಾಳು ಬಿದ್ದು ಸುಮಾರು ವರ್ಷಗಳೇ ಗತಿಸಿವೆ. ಬೆಳಿಗ್ಗೆ ವಾಯು ವಿಹಾರಕ್ಕೆ ಬರುವ ಮಹಿಳೆಯರಿಗೆ ಕೂರಲು ಸೂಕ್ತ ವ್ಯವಸ್ಥೆ ಇಲ್ಲ, ಮಕ್ಕಳಿಗೆ ಆಟದ ಮೈದಾನವಿಲ್ಲ.
ಇಲ್ಲಿ ವಯೋವೃದ್ಧರು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಇಲ್ಲ. ಮೇಯರ್ ಅವರ ವ್ಯಾಪ್ತಿಗೆ ಬರುವ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.