ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ `ಮುದುಕನ ಮದುವೆ’ ನಾಟಕ

ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ `ಮುದುಕನ ಮದುವೆ’ ನಾಟಕ

ದಾವಣಗೆರೆ, ಜ. 28- ಪದ್ಮಶ್ರೀ ಚಿಂದೋಡಿಲೀಲಾ ಟ್ರಸ್ಟ್ ಹಾಗೂ ಶಿವಸಿಂಪಿ ಸಮಾಜ ಇವರ ಸಹಯೋಗದಲ್ಲಿ ಇದೇ 21ರಂದು ಪದ್ಮಶ್ರೀ ಚಿಂದೋಡಿ ಲೀಲಾ ಅವರ 15ನೇ ವರ್ಷದ ರಂಗ ಸ್ಮರಣೆ ಹಾಗೂ ರಂಗಭೂಮಿ ಕಲಾವಿದರ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ  ನಗರದ ಎಂ.ಸಿ.ಸಿ. ಬಿ  ಬ್ಲಾಕ್ ನಲ್ಲಿರುವ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಮುದುಕನ ಮದುವೆ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು.

 ಸಮಾಜದ ಗೌರವಾಧ್ಯಕ್ಷರಾದ ಗುರುಬಸಪ್ಪ ಬೂಸನೂರು, ಹೇಮಣ್ಣ ಜವಳಿ, ಕಣಕುಪ್ಪಿ ಮುರುಗೇಶಪ್ಪ ಅವರ ಸಮ್ಮುಖದಲ್ಲಿ, ಸಮಾಜ ಬಾಂಧವರು, ಕಲಾಭಿಮಾನಿಗಳು ಕಿಕ್ಕಿರಿದು ತುಂಬಿದ್ದ ಕಲಾ ಕ್ಷೇತ್ರದಲ್ಲಿ  ರಂಗ ಸಂಭ್ರಮ ಮೇಳೈಸಿತ್ತು. ಕೊಟ್ಟ ಸಾಲ ಹಿಂದಿರುಗಿಸಲಾಗದ ಬಡ ರಾಜೀವಪ್ಪನ ಅಸಹಾಯಕತೆಗೆ, ಮಗಳ ವಯಸ್ಸಿನ ಕಲ್ಯಾಣಿಯನ್ನು ಮದುವೆಯಾಗಲು ಹಾತೊರೆಯುವ ಸಾಹುಕಾರ ರಂಗಣ್ಣ, ಕಪ್ಪುವರ್ಣದ ಅಚ್ಚಮ್ಮ ಮದುವೆಯಾಗಲು ಗಂಡಿಗಾಗಿ ಹುಡುಕಾಟ, ನಾಟಕದ ಲಚ್ಚಿಯನ್ನು
ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಲು ಚಡಪಡಿಸುವ ಮಂದಾಕಿನಿ,  ಮಲತಾಯಿಯ ಕಿರುಕುಳದಿಂದ ನಲುಗುತ್ತಿರುವ ಕಲ್ಯಾಣಿ, ಕಲ್ಯಾಣಿಯನ್ನು ಮೆಚ್ಚಿ ಮದುವೆಯಾಗಲು ಮುಂದಾದ ಶಾಮ, ಕೊನೆಗೆ ಶೇಷಣ್ಣನ ಜಾಣ್ಮೆಯ ನಿರ್ಧಾರದಿಂದ ಸರಿ ಜೋಡಿಗಳೊಂದಿಗೆ ಮದುವೆ ನೆರವೇರುತ್ತದೆ, 

ಹೀಗೆ ನಾಟಕದ ಹಾಸ್ಯ ದೃಶ್ಯಗಳು ನಗೆಯ ಬುಗ್ಗೆ ಅರಳಿಸಿದರೆ, ಗಂಭೀರ ಸನ್ನಿವೇಶಗಳು  ಮನಮಿಡಿಯುತ್ತ ಸಾಗಿ, ಹಿರಿಯ ಅನುಭವಿ ಕಲಾವಿದರ ಮನೋಜ್ಞ ಅಭಿನಯದಿಂದ ನಾಟಕ ಯಶಸ್ಸು ಕಂಡಿತು.

 ಸಾಹುಕಾರ ರಂಗಣ್ಣನ ಹಾಸ್ಯ ಪಾತ್ರದಲ್ಲಿ ಚಿಂದೋಡಿ ಚಂದ್ರಧರ ಹಾಗೂ ಶೇಷಣ್ಣನ ಪಾತ್ರದಲ್ಲಿ ಚಿಂದೋಡಿ ಮಧುಕೇಶ ಆಕರ್ಷಕ ಜೋಡಿಯಾಗಿ ಪ್ರತಿ ಸನ್ನಿವೇಶದಲ್ಲೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. 

ಕಥಾನಾಯಕ ಶ್ಯಾಮ್ ಪಾತ್ರದಲ್ಲಿ ಕುಂದೂರು ಮಂಜುನಾಥ, ರಾಜೀವಪ್ಪನಾಗಿ ಮಹಾರುದ್ರಚಾರ್ ಹರಪನಹಳ್ಳಿ, ನಾಟಕದ ಲಕ್ಷ್ಮಣನಾಗಿ ಮಾರುತಿ ಬೆಂಗೇರಿ ಹಾಗೂ ಸ್ತ್ರೀ ಪಾತ್ರದಲ್ಲಿ ಕಾವೇರಿ-ಶೈಲಜಾ ಕುಂದಾಪುರ, ಮಂದಾಕಿನಿ- ಪ್ರೇಮ ತಾಳಿಕೋಟೆ, ಕಲ್ಯಾಣಿ- ಲಕ್ಷ್ಮಿ ಹೊಸಪೇಟೆ,  ಅಚ್ಚಮ್ಮನಾಗಿ ಉಮಾರಾಣಿ ಇಳಕಲ್, ಇವರು ಪಾತ್ರಕ್ಕೆ ಮೆರಗು ತಂದುಕೊಂಡು ಸನ್ನಿವೇಶಗಳು ರಂಗೇರಿ, ರಂಗಾಸಕ್ತರನ್ನು ರಂಜಿಸುವಲ್ಲಿ ಸಫಲರಾದರು.

ಮಹಾಂತೇಶ್ ಬೆಳಗಲಿ ಅವರ ಕ್ಯಾಶಿಯೋ ಹಾಗೂ ಪರಮೇಶ್ ಪಾಲ್ ರ  ಪ್ಯಾಡ್ ಸಂಗೀತ ಸಂಯೋಜನೆಯಲ್ಲಿ ನಾಟಕದ ಸನ್ನಿವೇಶಗಳು ಕಳೆ ಕಟ್ಟುವಂತಾದವು, ನಾಟಕದ ವ್ಯವಸ್ಥೆಯನ್ನು ಚಿಂದೋಡಿ ವೀರಶಂಕರ್ ನಿರ್ವಹಿಸಿದರು.

error: Content is protected !!