ಹರಿಹರ, ಜ.30- 2024ರ ಮಳೆಗಾಲದಲ್ಲಿ ಮಳೆ, ಗಾಳಿಗೆ ತಾಲ್ಲೂಕಿನಲ್ಲಿ ವಿದ್ಯುತ್ ಮಾರ್ಗಗಳಿಗೆ 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ಬೆಸ್ಕಾಂ ಹರಿಹರ ಉಪ ವಿಭಾಗದವರು ತಯಾರಿಸಿರುವ ಅಂದಾಜು ಪಟ್ಟಿಯ ಕುರಿತು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಇಲ್ಲಿನ ಹಿರಿಯ ವಿದ್ಯುತ್ ಗುತ್ತಿಗೆದಾರ ಕೆ.ಬಿ. ಉಮೇಶ್ ಆಗ್ರಹಿಸಿದರು.
ಬುಧವಾರ ನಡೆದ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ವಿಭಾಗದ ಅಧಿಕಾರಿಗಳು ಸಿದ್ಧ ಪಡಿಸಿದ ಹಾನಿಗೆ ಒಳಗಾದ ವಿದ್ಯುತ್ ಮಾರ್ಗಗಳ ಅಂದಾಜು ಪಟ್ಟಿಗಳಿಗೆ ಬೆಸ್ಕಾಂ ವಿಭಾಗೀಯ ಕಚೇರಿಯ ಕಾರ್ಯ ನಿರ್ವಾಹಕ ಇಂಜಿನಿಯರ್ ಕಾರ್ಯಾದೇಶವನ್ನು ಮಾಡಿ ತಮಗೆ ಬೇಕಾದ ವ್ಯಕ್ತಿಗಳಿಗೆ ಕಾಮಗಾರಿ ನಿರ್ವಹಣೆಗೆ ಅವಾರ್ಡ್ ನೀಡಿದ್ದಾರೆ ಎಂದರು.
ಈ ಹಿಂದೆ ಬೇರೆ ವರ್ಷಗಳಲ್ಲಿ ಮಳೆ, ಗಾಳಿಯಿಂದ ವಿದ್ಯುತ್ ಮಾರ್ಗಗಳಿಗೆ ಆಗಿರುವ ಹಾನಿಯ ಫೋಟೋಗಳನ್ನು ಈಗ ಒದಗಿಸಿ ಕಾರ್ಯಾದೇಶ ಮತ್ತು ಅವಾರ್ಡ್ ಪಡೆದುಕೊಂಡು ಬೆಸ್ಕಾಂ ಅಧಿಕಾರಿಗಳಿಗೆ ಬೇಕಾದ ವ್ಯಕ್ತಿಗಳು ಈಗಾಗಲೇ ಕೆಲವು ಬಿಲ್ಲುಗಳನ್ನೂ ಸಲ್ಲಿಸಿರುತ್ತಾರೆ.
ನೆಪ ಮಾತ್ರಕ್ಕೆ ಅಲ್ಲೊಂದು, ಇಲ್ಲೊಂದು ಕಾಮಗಾರಿ ನಡೆಸಲಾಗಿದೆ, ಉಳಿದ ಸಾಮಗ್ರಿಗಳಾದ ಅಂದರೆ ವಿದ್ಯುತ್ ಕಂಬ ಮತ್ತು ಇತರೆ ಸಾಮಗ್ರಿಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಶಂಕೆಯೂ ಇದೆ. ಈ ಕುರಿತು ಇಲ್ಲಿನ ಬೆಸ್ಕಾಂ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮೌಖಿಕವಾಗಿ ಹಲವು ಬಾರಿ ಗಮನ ಸೆಳೆದರೂ ಕೂಡ ಯಾವುದೇ ಉಪಯೋಗವಾಗಿಲ್ಲ ಎಂದರು.
ಬೆಸ್ಕಾಂ ಅಧಿಕಾರಿಗಳೇ ಶಾಮೀಲಾಗಿ ಬೆಸ್ಕಾಂಗೆ ನಷ್ಟ ಉಂಟು ಮಾಡುತ್ತಿರುವ ಈ ಪ್ರಕರಣದ ಕುರಿತು ಬೆಸ್ಕಾಂನ ಟೆಕ್ನಿಕಲ್ ಆಡಿಟ್ ಅಂಡ್ ಕ್ವಾಲಿಟಿ ಕಂಟ್ರೋಲ್ (ಟಿಎಕ್ಯುಸಿ) ಶಾಖೆ ಮತ್ತು ಬೆಸ್ಕಾಂನ ವಿಚಕ್ಷಣಾ ದಳದಿಂದ ಸಮಗ್ರ ತನಿಖೆ ನಡೆಸಬೇಕೆಂದು ಇಂಧನ ಸಚಿವರು ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಧ್ಯಮದ ಮೂಲಕ ಆಗ್ರಹಿಸಿದರು.
ಬೆಸ್ಕಾಂ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸುತ್ತಿರುವ ನನಗೆ ಬೆದರಿಸಲೆಂದು ಈಗಾಗಲೇ ಒಬ್ಬ ವ್ಯಕ್ತಿಯಿಂದ ದೂರವಾಣಿ ಕರೆ ಮಾಡಿಸಿ ಬೆದರಿಸಲಾಗಿದೆ. ನನ್ನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದ್ದು, ನನಗೆ ರಕ್ಷಣೆ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ಹಿರಿಯ ಗುತ್ತಿಗೆದಾರ ಭಾನುವಳ್ಳಿ ಎಸ್.ಜಿ. ಮಂಜುನಾಥ್ ಮಾತನಾಡಿ, ನಗರದ ಖಾಸಗಿ ಲೇಔಟ್ನಲ್ಲಿ ಅಳವಡಿಸಿದ್ದ 5 ಟಿಸಿಗಳ ಪೈಕಿ 3 ಟಿಸಿಗಳು ಕಾಣೆಯಾಗಿವೆ. ಈ ಕುರಿತು ಟಿಎಕ್ಯುಸಿಗೆ ದೂರು ಸಲ್ಲಿಸಲಾಗಿದೆ. ಮಳೆ, ಗಾಳಿಯ ನಷ್ಟ 4 ಕೋಟಿಗೂ ಹೆಚ್ಚಾಗಿ ಅಂದಾಜಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಇಂತಹ ಸೋರಿಕೆಗಳಿಂದಾಗಿಯೇ ಬೆಸ್ಕಾಂ 9018 ಕೋಟಿ ರೂ.ಗಳ ನಷ್ಟದಲ್ಲಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಹರಿಹರ ಬೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್. ಪುಟ್ಟಪ್ಪ, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿ, ಸೋರಿಕೆ ಉಂಟು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿದ್ಯುತ್ ಗುತ್ತಿಗೆದಾರರಾದ ಎಂ.ಬಿ. ಫಾಜಿಲ್, ಡಿ.ಬಿ. ಕೆರೆ ರವಿಕುಮಾರ್, ಎನ್.ಎಂ. ಕೊಟ್ರೇಶ್, ಕೆ.ಎನ್.ಬಸವರಾಜ್, ಜಯರಾಮ್ ರೋಖಡೆ, ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಇದ್ದರು.