ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ವಾಲ್ಮೀಕಿ ಹೆಸರಿನ ಜಾತ್ರೆಗೆ ಜಿಲ್ಲಾಧಿಕಾರಿ ಕರೆ

ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ವಾಲ್ಮೀಕಿ ಹೆಸರಿನ ಜಾತ್ರೆಗೆ ಜಿಲ್ಲಾಧಿಕಾರಿ ಕರೆ

ಮಲೇಬೆನ್ನೂರು, ಜ.28- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ, ಶಿಸ್ತು ಬದ್ಧವಾಗಿ, ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.

ಅವರು, ಮಂಗಳವಾರ ರಾಜನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ 7ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾತ್ರೆಯಲ್ಲಿ ಜನರ ಆರೋಗ್ಯ ಹಾಗೂ ನೈರ್ಮಲ್ಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿರುವುದರಿಂದ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಜೊತೆಗೆ ಆಂಬ್ಯುಲೆನ್ಸ್‌ಗಳನ್ನು ಇಲ್ಲಿಯೇ ಕಾಯ್ದಿರಿಸುವಂತೆ ಡಿಹೆಚ್ಓ ಷಣ್ಮುಖಪ್ಪ ಅವರಿಗೆ ಸೂಚಿಸಿದರು.

ಕುಡಿಯುವ ನೀರಿನ ಸೌಲಭ್ಯ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡುವಂತೆ ಜಿ.ಪಂ. ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಫೆ.7ರ ರಾತ್ರಿಯಿಂದ ಫೆ.10 ರ ಬೆಳಿಗ್ಗೆವರೆಗೆ ಅನಿಯಮಿತ ವಿದ್ಯುತ್ ಪೂರೈಕೆಗಾಗಿ ಹೆಚ್ಚುವರಿ ಮೊಬೈಲ್ ಟಿಸಿಗಳನ್ನು ದಾಸ್ತಾನಿಟ್ಟುಕೊಳ್ಳಬೇಕು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಜಾತ್ರೆಗೆ ಲಕ್ಷಾಂತರ ಜನರ ಜೊತೆಗೆ ಮಠಾಧೀಶರು, ಮುಖ್ಯಮಂತ್ರಿ ಸೇರಿದಂತೆ ಬಹಳಷ್ಟು ಜನ ಜನಪ್ರತಿನಿಧಿಗಳು ಭಾಗವಹಿಸುತ್ತಿ ರುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದರು.

ಜಿ.ಪಂ. ಸಿಇಓ ಸುರೇಶ್ ಬಿ. ಇಟ್ನಾಳ್ ಮಾತನಾಡಿ, 2 ದಿನಗಳ ಕಾಲ ಜರುಗುವ ವಾಲ್ಮೀಕಿ ಜಾತ್ರೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಎಲ್ಲಾ ಇಲಾಖೆಗಳಲ್ಲಿ ಜನರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡುವ  ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದೆಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಾತ್ರಾ  ಸಮಿತಿ ಅಧ್ಯಕ್ಷರೂ ಆದ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತಿಗೆ ಸಿಮೀತವಾಗಿ ನಡೆಯುತ್ತಿಲ್ಲ. ಇಡೀ ಮನುಕುಲದ ಆದರ್ಶ ಬದುಕಿಗಾಗಿ ರಾಮಾಯಣದ ಮೂಲಕ ಉತ್ತಮ ಸಂದೇಶ ನೀಡದ ವಾಲ್ಮೀಕಿ ಅವರ ಹೆಸರಿನ ಈ ಜಾತ್ರೆಯನ್ನು ಎಲ್ಲರೂ ಸೇರಿ ಆಚರಿಸೋಣ ಎಂದರು.

ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ಧರ್ಮದರ್ಶಿ ಶ್ರೀಮತಿ ಶಾಂತಲಾ ರಾಜಣ್ಣ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ ಮಾತ ನಾಡಿದರು. ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿ ಭಾಗಾಧಿಕಾರಿ ಸಂತೋಷ್ ಕುಮಾರ್, ಡಿವೈಎಸ್ಪಿ ಬಸವರಾಜು, ತಹಶೀಲ್ದಾರ್ ಗುರುಬಸವರಾಜು, ತಾ.ಪಂ. ಇಓ ಸುಮಲತಾ, ಸಿಪಿಐ ಸುರೇಶ್ ಸಗರಿ, ಲಕ್ಷ್ಮಣ್ ನಾಯ್ಕ, ಪಿಎಸ್ಐ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಡಿಪಿಎಫ್ ಗೋಪ್ಯನಾಯ್ಕ, ಆರ್ಎಫ್ಒ ಮಹೇಶ್ವರಪ್ಪ, ಮಠದ ಧರ್ಮದರ್ಶಿಗಳಾದ ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ್, ಮಾಜಿ ಮೇಯರ್ ವಿನಾಯಕ ಪೈಲ್ವಾನ್, ತಿಮ್ಮೇನಹಳ್ಳಿ ಚಂದ್ರಪ್ಪ, ವಿಜಯಶ್ರೀ, ಪಾರ್ವತಿ, ಗೌರಮ್ಮ, ನಿವೃತ್ತ ಶಿಕ್ಷಕರಾದ ಜಿ.ಆರ್.ನಾಗರಾಜ್, ವಾಸನ ಮಹಾಂತೇಶ್, ರಾಜನಹಳ್ಳಿ ಭೀಮಣ್ಣ, ಮಕರಿ ಪಾಲಾಕ್ಷಪ್ಪ, ಚಂದ್ರಪ್ಪ ಬೇಡರ್, ಕೊಂಡದಹಳ್ಳಿ ಜಯಣ್ಣ, ಕಲ್ಲಾಪುರ ಮಂಜುನಾಥ್, ಕೆ.ಬೇವಿನಹಳ್ಳಿ ಹಾಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪತ್ರಕರ್ತ ಜಿಗಳಿ ಪ್ರಕಾಶ್ ಸ್ವಾಗತಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ನವೀನ್ ಮಠದ್ ವಂದಿಸಿದರು.

error: Content is protected !!