ಸಂಸದರ ಸಮಯಾವಕಾಶಕ್ಕೆ ಕಾಯುವುದು ಸಲ್ಲದು

ಸಂಸದರ ಸಮಯಾವಕಾಶಕ್ಕೆ ಕಾಯುವುದು ಸಲ್ಲದು

ಶಾಸಕ ಬಿ.ಪಿ. ಹರೀಶ್

ಹರಿಹರ, ಜ. 23- ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು ನಾನಾ ಯೋಜನೆ, ಕಟ್ಟಡಗಳ ಉದ್ಘಾಟನಾ ಸಮಾರಂಭ ಆಯೋಜಿಸಲು ಸಂಸದರ ಸಮಯಾವಕಾಶಕ್ಕಾಗಿ ಕಾಯುವುದು ಸರಿಯಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಕಾಯಬೇಕೇ ಹೊರತು, ಸಂಸದರಿಗಲ್ಲ. ಸಂಸದರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುತ್ತಾರಷ್ಟೆ ಎಂದರು.

 ಜಿಲ್ಲಾ ಉಸ್ತುವಾರಿ ಸಚಿವರಿಗಾದರೆ ಒಂದೆರಡು ದಿನ ಕಾಯಬಹುದು, ಇದರ ಜೊತೆಗೆ ಶಾಸಕರಿಗೂ ಗೌರವ ಕೊಡಬೇಕು, ಸಂಸದರು ಸಮಯಾವಕಾಶ ಕೊಟ್ಟಿಲ್ಲ, ಸಂಸದರು ಅವತ್ತು ಬರುತ್ತಾರೆ, ಇವತ್ತು ಬರುತ್ತಾರೆ ಎಂಬ ಸಬೂಬನ್ನು ಇನ್ನು ಮುಂದೆ ನಾನು ಕೇಳಲ್ಲ ಎಂದು ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಭಾ ಸೂಚನಾ ಪತ್ರದಲ್ಲಿ ಶಾಸಕರು ಹಾಗೂ ಆಡಳಿತಾಧಿಕಾರಿಯವರ ಹೆಸರಿನ ಜೊತೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‍ರವರ ಹೆಸರು ಇದ್ದ ವಿಷಯ ಪ್ರಸ್ತಾಪಿಸಿದ ಶಾಸಕರು, ಈ ಸೂಚನಾ ಪತ್ರ ಸಿದ್ಧಪಡಿಸುವ ಜವಾಬ್ದಾರಿ ಯಾರದ್ದು ? ಎಂದು ಪ್ರಶ್ನಿಸಿದರು.

ಆಗ ಸಭೆಯಲ್ಲಿದ್ದ ಸಿಬ್ಬಂದಿ ಸಲೀಂ ಎಂಬುವರು ಎದ್ದು ಕೇಸ್ ವರ್ಕರ್ ಮೊಹಮ್ಮದ್ ಅಲಿ ಎಂದರು. ಆಗ ಮೊಹಮ್ಮದ್ ಎಂಬುವರನ್ನು ಸಭೆಗೆ ಕರೆಯಿಸಿದರು, ತಪ್ಪು ಮಾಡಿರುವ ಮೊಹಮ್ಮದರನ್ನು ಸಸ್ಪೆಂಡ್ ಮಾಡಲು ಕ್ರಮಕೈಗೊಳ್ಳಿರಿ ಎಂದು ಇಒ ಸುಮಲತಾ ಎಸ್.ಪಿ. ಇವರಿಗೆ ತಾಕೀತು ಮಾಡಿದರು.

ನಂತರ ತಮ್ಮ ಸಿಟ್ಟಿನ ಮಾತನ್ನು ಮುಂದುವರೆಸಿದ ಶಾಸಕರು, ಮೊಹಮ್ಮದ್ ಮತ್ತು ಸಲೀಂ, ನಿಮ್ಮ ಕರ್ತವ್ಯದ ಅವಧಿ ಮುಗಿದ ನಂತರ ಅವರ ಮನೆಗೆ (ಸಂಸದರು) ಹೋಗಿ ಕಸ ಹೊಡೆಯಿರಿ, ಅದು ನನಗೆ ಸಂಬಂಧಿಸಿದ್ದಲ್ಲ, ಆದರೆ ಕಚೇರಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿರಿ ಎಂದು ಎಚ್ಚರಿಸಿದರು.

ನಂತರ ಪಂಚಾಯತ್‍ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಗಿರೀಶ್‍ರನ್ನು ಉದ್ದೇಶಿಸಿ, ತಾಪಂ ಇಒ ನಿಗದಿ ಮಾಡಿದ ಏಜೆನ್ಸಿಯವರಿಗೆ ನೀವು ಕಾಮಗಾರಿ ಕೊಡುವುದು ಬಿಟ್ಟು, ಇವರು ಕಾಂಗ್ರೆಸ್ಸಿನವರು, ಇವರು ಬಿಜೆಪಿಯವರು ಎಂದು ಕಾಮಗಾರಿ ನೀಡುವಲ್ಲಿ ತಾರತಮ್ಯ ಮಾಡುತ್ತೀರ, ಇದೆಲ್ಲವನ್ನು ನಾನು ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.

ಈ ಕ್ಷೇತ್ರದ ಶಾಸಕನಾಗಿ ನನಗೆ ನೀಡಬೇಕಾದ ಗೌರವ ನೀಡಬೇಕು, ಯಾರದ್ದೂ ಮಾತು ಕೇಳಬೇಡಿರಿ, ನಾನು ಈ ಹಿಂದೆ ಮಾಜಿ ಶಾಸಕನಿದ್ದಾಗ ಬಿಜೆಪಿ ಸರ್ಕಾರವಿದ್ದಾಗ ಕ್ಷೇತ್ರಕ್ಕೆ ವಿಶೇಷ ಅನುದಾನ ತರಿಸಿದ್ದೇನೆ, ಪಾಪರ್ ಆಗಿರುವ ಈ ಸರ್ಕಾರದಲ್ಲಿ ತಾಕತ್ತಿದ್ದರೆ ಅವರೂ ವಿಶೇಷ ಅನುದಾನ ತರಿಸಲಿ ಎಂದು ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ಹೆಸರು ಪ್ರಸ್ತಾಪಿಸದೇ ಹೇಳಿದರು.

ಈಚೆಗೆ ನಗರಸಭೆ ಆವರಣದಲ್ಲಿ ದೂಡಾ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದ ಸೂಚನಾ ಪತ್ರದಲ್ಲಿ ತಮ್ಮ ಹೆಸರು ಪ್ರಕಟಿಸುವಲ್ಲಿ ಅಗೌರವ ಸೂಚಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿಯವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

error: Content is protected !!