ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇನ್ನೂ ತಲುಪದ ನೀರು

ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇನ್ನೂ ತಲುಪದ ನೀರು

ಕೆ.ಎನ್.ಹಳ್ಳಿ ಬಳಿ ನೀರಿಲ್ಲದೆ ಒಣಗಿರುವ ಭದ್ರಾ ಕಾಲುವೆ

ಮಲೇಬೆನ್ನೂರು, ಜ.21-  ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿ 12 ದಿನ ಕಳೆದಿದ್ದರೂ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕಾಲುವೆಗಳಿಗೆ ಇನ್ನೂ ನೀರು ತಲುಪಿಲ್ಲ ಎಂದು ಭಾನುವಳ್ಳಿ, ಹೊಳೆಸಿರಿಗೆರೆ, ಕೆ.ಎನ್.ಹಳ್ಳಿ, ಪಾಳ್ಯ, ಕೊಕ್ಕನೂರು, ಕಮಲಾಪುರ, ಯಲವಟ್ಟಿ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುವೆಯಲ್ಲಿ ನೀರು ಬಂದ ನಂತರ ನಾವು ಭತ್ತದ ಬೀಜ ಚೆಲ್ಲಿ ಸಸಿ ಮಡಿ ಬೆಳೆಸಿಕೊಳ್ಳ ಬೇಕಾಗಿರುತ್ತದೆ. ಆದರೆ, ಇದುವರೆಗೂ ಕಾಲುವೆಯಲ್ಲಿ ನೀರು ಬಂದಿಲ್ಲ. ನಾವು ಯಾವಾಗ ಬೀಜ ಚೆಲ್ಲಿ, ಯಾವಾಗ ನಾಟಿ ಮಾಡಬೇಕೆಂದು ರೈತರು ಪ್ರಶ್ನೆ ಮಾಡಿದ್ದಾರೆ.

ನೀರಿನ ನಿರ್ವಹಣೆ ಮಾಡಬೇಕಾದ ಇಂಜಿನಿಯರ್‌ಗಳು ಮತ್ತು ಸೌಡಿಗಳು ಇದುವರೆಗೂ ನಮ್ಮ ಭಾಗಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಗಮನ ಹರಿಸಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಭದ್ರಾ ಜಲಾಶಯದಿಂದ ಜನವರಿ 8 ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.  ಆದರೆ  ಮಲೇಬೆನ್ನೂರು ಭದ್ರಾ ನಾಲಾ ನಂ. 3 ಉಪವಿಭಾಗ ವ್ಯಾಪ್ತಿಯ ಕೊಕ್ಕನೂರು, ಕಡರನಾಯ್ಕನಹಳ್ಳಿ, ಹೊಳೆ ಸಿರಿಗೆರೆ, ಕಮಲಾಪುರ ಮತ್ತಿತರೆ ಗ್ರಾಮಗಳ ಕಾಲುವೆಗಳಿಗೆ ಇದುವರೆಗೂ ಹನಿ ನೀರೂ ಸಹ ಹರಿದು ಬಂದಿಲ್ಲ. ಕಾಲುವೆಗಳು ಹೂಳು ತುಂಬಿ ಕೊಂಡಿವೆ.  ತೋಟಗಳಿಗೂ ನೀರಿನ ಅವಶ್ಯಕತೆ ಇದೆ. 

ಭತ್ತದ ಸಸಿಗಳನ್ನು ಬೆಳೆಸಿ ನಾಟಿ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ವಿಳಂಬವಾದರೆ ಇಳುವರಿ ಕುಂಠಿತವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಕೂಡಲೇ ನಮ್ಮ ಸಮಸ್ಯೆ ಕಡೆ ಗಮನ ಹರಿಸಬೇಕೆಂದು ಆಗ್ರಹಿಸಿರುವ ರೈತ ಸಂಘದ ಸಿರಿಗೆರೆ ಪಾಲಾಕ್ಷಪ್ಪ, ಕೆ.ಎನ್. ಹಳ್ಳಿ ಪ್ರಭುಗೌಡ, ಭಾನುವಳ್ಳಿ ಧನ್ಯಕುಮಾರ್ ಮತ್ತಿತ ರರು, ಕಂಡೂ ಕಾಣದ ರೀತಿಯಲ್ಲಿ ಅಧಿ ಕಾರಿಗಳು ಕುಳಿತುಕೊಂಡಿರುವುದು ವಿಪರ್ಯಾಸ ಎಂದಿದ್ದಾರೆ.

ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಬೇಕಾದರೆ ಕೊಮಾರನಹಳ್ಳಿ ಬಳಿ ನಾಲ್ಕು ಅಡಿ ನೀರು ಹರಿಯಬೇಕು. ಆದರೆ ಈಗ ಎರಡರಿಂದ ಮೂರು ಅಡಿ ಮಾತ್ರ  ನೀರು ಹರಿಯುತ್ತಿದೆ, ಮೇಲ್ಭಾಗದಿಂದ ನಾಲೆಯಲ್ಲಿ ನೀರಿನ ಹರಿವನ್ನು ಹೆಚ್ಚಿಸಿಕೊಂಡು ಕೆಳಭಾಗಕ್ಕೆ ತರಬೇಕೆಂದು ರೈತರು ಒತ್ತಾಯಿಸಿದ್ದಾರೆ. ಕೂಡಲೇ  ವೇಳಾಪಟ್ಟಿ ರಚಿಸಿ ಆಯಾ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಲೇಬೆನ್ನೂರು ನೀರಾವರಿ ಇಲಾಖೆಯ ಎಇಇ ಕೃಷ್ಣಮೂರ್ತಿ ತಿಳಿಸಿದ್ದಾರೆ.

error: Content is protected !!