ದಾವಣಗೆರೆ, ಜ. 20- ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮುನ್ನಡೆಸುವ ಪ್ರಬಲವಾದ ಶಕ್ತಿ ಬಿ.ವೈ. ವಿಜಯೇಂದ್ರ ಅವರಿಗೆ ಇಲ್ಲವಾದ್ದರಿಂದ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಅನುಭವಿ ಮತ್ತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2028 ಕ್ಕೆ ಗ್ಯಾರಂಟಿ ಸರ್ಕಾರ ತೊಲಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನ ಬಯಸುತ್ತಿದ್ದಾರೆಂದು ಹೇಳಿದರು.
ವಿಜಯೇಂದ್ರ ಅವರಿಗೆ ಪಕ್ಷ ನಡೆಸುವ ಶಕ್ತಿ ಇಲ್ಲ. ಅನುಭವಿ, ದಕ್ಷ, ವಿರೋಧ ಪಕ್ಷವನ್ನು ಸಮರ್ಥವಾಗಿ ಎದುರಿಸುವ, ಭ್ರಷ್ಠಚಾರ ರಹಿತ ಸೂಕ್ತ ನಾಯಕನನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ವಿಜಯೇಂದ್ರಗೆ ಅನುಭವದ ಕೊರತೆ ಇದೆ ಎಂದು ರಮೇಶ್ ಜಾರಕಿ ಹೊಳಿ ಹೇಳಿದಾಕ್ಷಣ ಅವರಿಗೆ ಭಯ ಹುಟ್ಟಿಸುವಂತೆ ವಿಜಯೇಂದ್ರ ಹೇಳಿಕೆ ನೀಡಿರುವುದು ಸರಿಯಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದು 17 ಜನ ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿರುವುದನ್ಜು ಮರೆಯಬಾರದು ಎಂದರು.
ಮಾತೆತ್ತಿದರೆ ಪೂಜ್ಯ ತಂದೆಯವರು ಎಂಬ ಹೇಳಿಕೆ ಬಿಟ್ಟು ನಿಮ್ಮ ಸಾಧನೆ ಏನೆಂ ಬುದನ್ನು ತಿಳಿಸಲಿ, ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾಗರಾಜ್ ಗೌಡ್ರಗೆ ಟಿಕೆಟ್ ತಪ್ಪಿಸಿ, ನಿಮಗೆ ಭಿಕ್ಷೆ ನೀಡಿದ್ದೇವೆ ಎಂದು ಹೇಳಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ನೀವು ನಿಮ್ಮ ತಂದೆಯವರ ಸಹಿ ಪೋರ್ಜರಿ ಮಾಡಿದ್ದೀರೆಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದರೂ ಅದು ಸುಳ್ಳು ಎಂದು ಏಕೆ ಹೇಳುತ್ತಿಲ್ಲ ? ಎಂದು ಪ್ರಶ್ನಿಸಿದರು.