ಬಿಜೆಪಿಯಲ್ಲಿ ಬಿರುಕು ಬಿಟ್ಟರೆ ಕಾಂಗ್ರೆಸ್ ಆಡಳಿತ ನಿಶ್ಚಿತ..!
ಕಾಂಗ್ರೆಸ್ ಪ್ರವಾಸ..
ಚುನಾವಣೆ ದಿನಾಂಕ ನಿಗದಿಯಾಗುತ್ತಲೇ ಶಂಕರ್ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಸದಸ್ಯರು ನಿನ್ನೆ ಪ್ರವಾಸಕ್ಕೆ ತೆರಳಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದ್ದು, ಸಂಸದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಭಿನ್ನಾಭಿಪ್ರಾಯ ಹೋಗಲಾಡಿಸುವ ಬಿರುಸಿನ ಪ್ರಯತ್ನ ನಡೆದಿದ್ದು, ಒಂದೆರಡು ದಿನಗಳಲ್ಲಿ ಬಿಜೆಪಿ ಸದಸ್ಯರೂ ಸಹ ಪ್ರವಾಸಕ್ಕೆ ತೆರಳಬಹುದು ಎಂದು ಹೇಳಲಾಗುತ್ತಿದೆ.
ರಾಣೇಬೆನ್ನೂರು, ಜ.21- ವರ್ಷಕ್ಕೂ ಅಧಿಕ ಕಾಲದಿಂದ ಖಾಲಿ ಇರುವ ರಾಣೇಬೆನ್ನೂರು ನಗರಸಭೆಯ ಹಿಂದುಳಿದ `ಅ’ ವರ್ಗದ ಮಹಿಳೆಯ ಅಧ್ಯಕ್ಷ ಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದು, ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾವೇರಿ ಉಪವಿಭಾಗಾಧಿಕಾರಿ ಜ.28 ರಂದು ಸಭೆ ಕರೆದಿದ್ದಾರೆ.
ಸಂಸದರ ಜತೆಗೆ ಆರ್. ಶಂಕರ್ ಗುಂಪಿನಿಂದ ಬಂದವರು ಸೇರಿದಂತೆ ಒಟ್ಟು 22 ಸದಸ್ಯರನ್ನು ಹೊಂದಿರುವರೂ ಬಿಜೆಪಿಯು ಅಧಿಕಾರ ಹಿಡಿಯುವ ಸ್ಪಷ್ಟ ಚಿತ್ರಣ ಕಂಡು ಬರುತ್ತಿದೆ. ಆದರೆ, ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣ ಕುಮಾರ ಪೂಜಾರ ಹಾಗೂ ಅಚಲ ಹಿಂದುತ್ವವಾದಿ ಪ್ರಕಾಶ ಬುರಡಿಕಟ್ಟಿ ಗುಂಪಿನ ನಡುವೆ ಇರಬಹುದಾದ `ಶೀತಲ ಸಮರ’ ಇಲ್ಲಿ ಪ್ರಭಾವ ಬೀರಿದರೆ, ಫಲಿತಾಂಶ ತಲೆ ಕೆಳಗಾಗಬಹುದು ಎಂದು ಹೇಳಲಾಗುತ್ತಿದೆ.
ಮೊದಲನೇ ಅವಧಿಯ ಅಧ್ಯಕ್ಷರ ಬದಲಾವಣೆ ಸಂದರ್ಭದಲ್ಲಿ ನಡೆದ ರಾಜಕೀಯ ಚದುರಂಗದಾಟದಲ್ಲಿ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಬಿಜೆಪಿಯ ರೂಪಾ ಚಿನ್ನಕಟ್ಟಿ ಅವರೇ ಅಧ್ಯಕ್ಷರಾಗಿ ಮುಂದು ವರೆದಿದ್ದರು.
ಈ ಬಾರಿಯೂ ರೂಪಾ ಚಿನ್ನಕಟ್ಟಿ ಅವರ ಹೆಸರು ರೇಸ್‌ನಲ್ಲಿ ಕೇಳಿಬರುತ್ತಿದ್ದು, ಬಿಜೆಪಿ ಕೈಕೊಟ್ಟರೆ, ಕಾಂಗ್ರೆಸ್ ಋಣ ತೀರಿಸಲು ಬುರಡಿಕಟ್ಟಿ ಬಣ ಸಜ್ಜಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ನಲ್ಲಿ ಮೂವರು ಆಕಾಂಕ್ಷಿಗಳಿದ್ದರೂ ಸಹ ಪಕ್ಷವು ಚಂಪಾ ಬಿಸಲ ಹಳ್ಳಿ ಅವರನ್ನೇ ಅಂತಿಮಗೊಳಿಸಬಹುದು ಎನ್ನಲಾಗುತ್ತಿ ದ್ದು, ಪ್ರಕಾಶ ಬುರಡಿಕಟ್ಟಿ ಬಳಗ ಕಾಂಗ್ರೆಸ್ ಬೆಂಬಲಿಸಿದರೆ, ಪ್ರಕಾಶ ಬುರಡಿಕಟ್ಟಿ ಅವರು ಉಪಾಧ್ಯಕ್ಷರಾಗಿ ಆಡಳಿತದ ಚುಕ್ಕಾಣಿ ಹಿಡಿಯಬಹುದು ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.