ವಿನೋಬನಗರದ ಪಾಳು ಬಿದ್ದ ಬಾವಿ ಮುಚ್ಚುವಂತೆ ಆಗ್ರಹ

ದಾವಣಗೆರೆ, ಜ.19- ಇಲ್ಲಿನ ವಿನೋಬ ನಗರದ 4ನೇ ಮುಖ್ಯ ರಸ್ತೆ, 4ನೇ ಅಡ್ಡ ರಸ್ತೆಯಲ್ಲಿ ಪಾಳು ಬಿದ್ದ ಅನುಪಯುಕ್ತ ಬಾವಿಯನ್ನು ಮುಚ್ಚುವಂತೆ ಇಲ್ಲಿನ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.

ಅಲ್ಲಿನ ನಿವೃತ್ತ ಪೊಲೀಸ್‌ ಅಧಿಕಾರಿ ರಹಮಾನ್‌ಖಾನ್‌ ಅವರ ಮನೆ ಬಳಿ ಇರುವ ಬಾವಿಯು ನಿಷ್ಪ್ರಯೋಜಕವಾಗಿದ್ದು, ಸುತ್ತಲಿನ ಜನರು ಇಲ್ಲಿ ಕೊಳೆತ ತರಕಾರಿ, ಕಸವನ್ನು ತಂದು ಸುರಿಯುತ್ತಿದ್ದರಿಂದ ಇಲ್ಲಿ ಸೂಸುವ ದುರ್ವಾಸನೆ ಸಾಂಕ್ರಾಮಿಕ ರೋಗಕ್ಕೆ ಆಮಂತ್ರಣ ನೀಡುತ್ತಿದೆ. ಬಾವಿಯ ಸುತ್ತಲೂ ಬಿದ್ದಿರುವ ಹರಕಲು ಬಟ್ಟೆ ಹಾಗೂ ಕಸ-ಮುಸರಿಯಂತಹ ಕೊಳಕು ಕಸಕ್ಕೆ ಬೀದಿ ನಾಯಿಗಳು ಮತ್ತು ಹಂದಿಗಳು ಮುಗಿ ಬಿದ್ದಿರುತ್ತವೆ. 

ಕಸವನ್ನು ರಸ್ತೆಗೆ ಎಳೆದು ತರುವ ಬೀದಿ ನಾಯಿ ಮತ್ತು ಹಂದಿಗಳು ಕೆಲವೊಮ್ಮೆ ನಾಗರಿಕರ ಮೇಲೂ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಮಕ್ಕಳು, ವೃದ್ಧರು ರಸ್ತೆಯಲ್ಲಿ ನಡೆದಾಡಲು ಭಯ ಬೀಳುತ್ತಿದ್ದಾರೆ. 

ನಗರದ ಸ್ವಚ್ಛತೆ ಹಾಗೂ ಇಲ್ಲಿನ ನಿವಾಸಿಗಳ ಹಿತದೃಷ್ಟಿಯಿಂದಾಗಿ ಅಹಿತಕರ ಘಟನೆ ಸಂಭವಿಸುವ ಮೊದಲೇ, ಮಹಾನಗರ ಪಾಲಿಕೆ ಇತ್ತ ಗಮನ ಹರಿಸಿ, ಅದನ್ನು ಮುಚ್ಚುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಪಾಳು ಬಿದ್ದ ಬಾವಿಯನ್ನು ಮುಚ್ಚದೇ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ಇಲ್ಲಿ ಯಾವುದೇ ಅಪಾಯ ಸಂಭವಿಸಿದರೂ ಅದರ ಹೊಣೆಗಾರಿಕೆ ಯನ್ನು ಪಾಲಿಕೆ ವಹಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!