ಬಿಸಿಯೂಟ ತಯಾರಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಬಿಸಿಯೂಟ ತಯಾರಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಹರಪನಹಳ್ಳಿ, ಜ.19- ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಬಿಸಿ ಊಟ ತಯಾರಕರಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕ ಫೆಡರೇಷನ್ಸ್‌ (ಎಐಟಿಯುಸಿ) ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘಟನೆಯ ರಾಜ್ಯ ಮಂಡಳಿ ಸದಸ್ಯ ಗುಡಿಹಳ್ಳಿ ಹಾಲೇಶ್ ಮಾತನಾಡಿ, 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುವ ಬಿಸಿ ಊಟ ತಯಾರಕರಿಗೆ ಕೇವಲ 3600 ರೂ. ಮಾತ್ರ ವೇತನ ನಿಡುತ್ತಿದ್ದು, ಪ್ರಸಕ್ತ ದಿನಗಳಲ್ಲಿ ಈ ವೇತನ ಜೀವನ ನಿರ್ವಹಣೆಗೆ ಕಷ್ಟಕರ ಎಂದು ಮನವರಿಕೆ ಮಾಡಿದರು.

ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ 6ನೇ ಗ್ಯಾರಂಟಿಯಾಗಿ ವೇತನ ಹೆಚ್ಚಿಸುವುದಾಗಿ ನೀಡಿದ ಭರವಸೆ ಮರೆಯಬಾರದು. ಕೂಡಲೇ ಇಡುಗಂಟು, ಮರಣ ಪರಿಹಾರ, ಆಸ್ಪತ್ರೆ ಚಿಕಿತ್ಸಾ ವೆಚ್ಚ ಹಾಗೂ ಮೊದಲಿದ್ದ ಬ್ಯಾಂಕ್ ಜಂಟಿ ಖಾತೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷೆ ಎ.ಪಿ ಪುಷ್ಪ ಮಾತನಾಡಿ, 1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲಾ ಬಿಸಿಯೂಟ ತಯಾರಕರಿಗೆ ಉಪಧನ ಗ್ರಾಚ್ಯುಟಿ ಜಾರಿಗೋಳಿಸಬೇಕು ಎಂದು ಆಗ್ರಹಿಸಿದರು.

ಈ ಮೊದಲು ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವುದಿತ್ತು, ಆದರೆ ಈಗ ವಾರಕ್ಕೆ ಆರು ದಿನ ಮೊಟ್ಟೆ ಕೊಡುವುದರಿಂದ ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ 60 ಪೈಸೆಗೆ ಹೆಚ್ಚಿಸಬೇಕು. ಈ ಹಣವನ್ನು ಅಡುಗೆಯವರ ಖಾತೆಗೆ ಜಮಾ ಮಾಡಬೇಕು ಎಂದರು.

ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಾವತಿಸಬೇಕು. ಬಿಸಿಯೂಟ ತಯಾರಕರಿಗೆ ನೀಡುವ ಕಿರುಕುಳ ತಪ್ಪಿಸಬೇಕು. ಕೂಡಲೇ ಬರಗಾಲ ಕಾರ್ಯಕ್ರಮದ ವೇತನವನ್ನು ಪಾವತಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಹೆಚ್.ಎಂ ಸಂತೋಷ್, ಬಳಿಗಾನೂರು ಕೊಟ್ರೇಶ್, ರಮೇಶ್ ನಾಯ್ಕ, ಗಂಗಮ್ಮ, ಹರಿಯಮ್ಮನಹಳ್ಳಿ ಬಸವರಾಜ್, ಹಗರಿ ಗುಡಿಹಳ್ಳಿ ಶಿವರಾಮ್, ದ್ವಾರಕೀಶ್, ತುಂಬಿಗೇರಿ ಅಕ್ಕಮ್ಮ, ಹೊಂಬಳಗಟ್ಟಿ ಸಾವಿತ್ರಮ್ಮ, ಮೈದೂರು ಮಂಜುಳಾ, ರುದ್ರಮ್ಮ, ತೆಲಿಗಿ ವಿಶಾಲಮ್ಮ, ಮಂಜುಳಾ, ಅಕ್ಕಮ್ಮ ಇತರರು ಇದ್ದರು.

error: Content is protected !!