ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ವಿಷಾದ
ಹೊನ್ನಾಳಿ, ಜ.19- ನೀತಿಯುತ ಬೋಧನೆ ಇಲ್ಲದೇ ಇಂದು ಶಿಕ್ಷಣದ ಮೌಲ್ಯಗಳು ಕುಸಿಯುತ್ತಿವೆ ಎಂದು ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ಸಾಯಿ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್ನಲ್ಲಿ ಹಮ್ಮಿಕೊಂಡಿದ್ದ 16ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶಿಕ್ಷಣಕ್ಕೆ ಯಾವಾಗಲೂ ಮನ್ನಣೆ, ಗೌರವ ಇದೆ, ರಾಜನಾದವನಿಗೆ ಅವನ ವ್ಯಾಪ್ತಿಯಲ್ಲಿ ಗೌರವಾದರಗಳು ಲಭಿಸಿದರೆ ಶಿಕ್ಷಣ ತಜ್ಞನಿಗೆ ವಿಶ್ವವ್ಯಾಪಿ ಗೌರವ ಸಿಗುತ್ತದೆ ಹಾಗಾಗಿ ಶಿಕ್ಷಣಕ್ಕೆ ತನ್ನದೇ ಆದ ಅದ್ಭುತ ಶಕ್ತಿ ಇದೆ ಎಂದು ಹೇಳಿದರು.
ಇಂದಿನ ಎಸ್ಸೆಸ್ಸೆಲ್ಸಿ ಮುಗಿಸಿದ ಮಕ್ಕಳಿಗೆ ಕ್ರಮ ಬದ್ಧವಾಗಿ ಹಾಗೂ ವ್ಯಾಕರಣ ಬದ್ಧವಾಗಿ ಬರೆಯುವುದಕ್ಕೆ ಬರುತ್ತಿಲ್ಲ. ಇದರಿಂದ ಶುದ್ಧ ಬರಹವೇ ಮಾಯವಾಗಿದೆ. ಇದರ ಬಗ್ಗೆ ತುಲನಾತ್ಮಕ ಚಿಂತನೆಯ ಅಗತ್ಯ ಇದೆ ತಿಳಿಸಿದರು.
ಪೋಷಕರು ತಮ್ಮ ಮಕ್ಕಳಿಗೆ ಎಲ್ಕೆಜಿಯಿಂದ ಪಿಯುಸಿವರೆಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿ ನಂತರ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸೇರಿದಂತೆ ಇತರೆ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳ ಮೊರೆ ಹೋಗುತ್ತಿದ್ದಾರೆ. ಈ ಧೋರಣೆ ಬದಲಾಗಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆಯಿದ್ದು, ವಿಜ್ಞಾನಿಗಳಾಗುವುದು ಸುಲಭವಾಗಿದ್ದು, ಸುಜ್ಞಾನಿಗಳಾಗು ವುದು ಕಷ್ಟಕರವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುರುಕುಲ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರೂ ಆದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಕ್ಷಣದ ಅವಶ್ಯಕತೆ ಇದೆ. ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾರ್ಥಿಗಳು ಶಿಸ್ತಿನಿಂದಿದ್ದು, ನಂತರ ಅಶಿಸ್ತು ತೋರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ, ವಿದ್ಯಾರ್ಥಿಗಳ ಈ ವರ್ತನೆಯಲ್ಲಿ ಉತ್ತಮ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.
ಕಾರ್ಯದರ್ಶಿ ಪಿ.ಸೌಮ್ಯ ಪ್ರದೀಪ್ಗೌಡ, ಸಂಸ್ಥೆ ಉಪಾಧ್ಯಕ್ಷ ಶಂಕರಪ್ಪಗೌಡ, ಖಜಾಂಚಿ ಡಿ.ಜಿ.ಸೋಮಪ್ಪ, ಆಡಳಿತಾಧಿಕಾರಿ ಡಿ.ಎಸ್. ಅರುಣ್ಕುಮಾರ್, ನಿರ್ದೇಶಕಿ ಗೌರಮ್ಮ, ಶಾಲಾಭಿವೃದ್ಧಿ ಸಮಿತಿಯ ಡಿ.ಎಸ್.ಪ್ರದೀಪ್ ಗೌಡ, ಪ್ರಾಂಶುಪಾಲ ಸಿ.ಜಿ.ಸುರೇಂದ್ರ, ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ಕುಮಾರ್, ಶಿಕ್ಷಕರಾದ ಮಧುಕುಮಾರ್, ತಿಪ್ಪೇಸ್ವಾಮಿ, ಹರೀಶ್ರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿಯರನ್ನು, ಜೆಇಇ, ನೀಟ್ ವಿಭಾಗದಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.