ದಾವಣಗೆರೆ, ಜ. 21 – ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ, ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ತಹಶೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, 2024-25ನೇ ಸಾಲಿನ ಬೆಳೆ ಕಂತನ್ನು ರೈತರು ವಿಮಾ ಕಂಪನಿಗಳಿಗೆ ತುಂಬಿದ್ದು, ಪ್ರಸ್ತುತ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ಹಾನಿಯಾಗಿವೆ. ಆದರೂ ಈವರೆಗೂ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳು ಸರ್ವೇ ಕಾರ್ಯ ನಡೆಸಿ ವಿಮೆ ಹಣವನ್ನು ಕೊಡಿಸುವ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡಿಸಿಲ್ಲ ಎಂದರು.
ವಿಮೆ ಕಂತು ಪಾವತಿ ಮಾಡಿಸಿಕೊಳ್ಳುವಾಗ ಕಂಪನಿಗೆ ರೈತರ ಮೇಲೆ ಇರುವ ಕಾಳಜಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ವಿಮಾ ಕಂಪನಿಗಳಿಗೆ ಪರಿಹಾರ ಕೊಡಿಸುವ ಸಮಯದಲ್ಲಿ ಇರುವುದಿಲ್ಲ.
2023-24ನೇ ಸಾಲಿನ ಬೆಳೆ ವಿಮೆಯಲ್ಲಿ ತಾಲ್ಲೂಕಿನ ಅನೇಕ ರೈತರಿಗೆ ಅನ್ಯಾಯವಾಗಿದ್ದು, ಬೆಳೆ ಸಮೀಕ್ಷೆ ಮಾಡುವ ಸಮಯದಲ್ಲಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಪ್ಪಾಗಿ
ಬೆಳೆ ಸಮೀಕ್ಷೆ ಮಾಡಿದ್ದು, ಪರಿಣಾಮ ರೈತರಿಗೆ ಇದುವರೆಗೂ ಪರಿಹಾರ ತಲುಪಿಲ್ಲ ಎಂದು ಆರೋಪಿಸಿದರು.
ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕೂಡಲೇ 2023-2024 ಮತ್ತು 2024-2025ನೇ ಸಾಲಿನ ಬೆಳೆ ವಿಮೆ ರೈತರಿಗೆ ಅತಿ ಶೀಘ್ರದಲ್ಲಿ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಅಶ್ವತ್ಥ್ ಮಾತನಾಡಿ, ಕೃಷಿ ಇಲಾಖೆ ನಿರ್ದೇಶಕರು ಮತ್ತು ಬೆಳೆ ವಿಮಾ ಕಂಪನಿಯೊಂದಿಗೆ ಮಾತನಾಡಿ, ಸಭೆ ನಡೆಸಿ ಸಮೀಕ್ಷೆಯಿಂದ ಹೊರಗುಳಿದಿರುವ ರೈತರ ಪಟ್ಟಿ ತರಿಸಿಕೊಂಡು ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ಪ್ರಕಾಶ್, ಸುರೇಶ್ ನಾಯಕ್, ಬಸವಾಪುರದ ಸಿದ್ದೇಶ್, ನರಗನಹಳ್ಳಿ ಚೌಡಪ್ಪ, ತಿಪ್ಪೇಸ್ವಾಮಿ, ಚಟ್ಟೋಬನಹಳ್ಳಿ ಕಂಪಳೇಶ್, ಅಣಬೇರು ಅಣ್ಣಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.