ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಜ. 17- ವಿಶ್ವದಲ್ಲಿ ಲಕ್ಷಾಂತರ ಜಾತಿಗಳನ್ನು ಹೊಂದಿರುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ. ಇಂತಹ ದೇಶದಲ್ಲಿ ಜನಿಸಿದ ನಾವುಗಳೆಲ್ಲಾ ಧನ್ಯರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲ್ಲೂಕು ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಹೊರ ವಲಯದಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಭಕ್ತಿ ಸಂಜೀವಿನಿ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶ ಪರ್ವತ ಶ್ರೇಣಿ, ಸಾಗರಗಳಿಂದ ಸುತ್ತುವರಿದು ಅತ್ಯಂತ ಸುರಕ್ಷತೆಯಲ್ಲಿ ಇದೆ. ಇದರಿಂದ ನೈಸರ್ಗಿಕ ಹಾಗೂ ಪ್ರಕೃತಿ ಸಹಾಯವೂ ನಮ್ಮ ದೇಶದ ಮೇಲಿದೆ ಎಂದರು.
ಜಾತ್ಯತೀತ ರಾಷ್ಟ್ರವಾಗಿದ್ದ ಭಾರತ ಇತ್ತೀಚಿನ ದಿನಗಳಲ್ಲಿ ಜಾತಿ ದೇಶವಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಸಂಕುಚಿತ ಮನೋಭಾವನೆ ಕಾರಣವಾಗಿದೆ ಎಂದ ಅವರು, ದೇಶದ ಎಲ್ಲಾ ಪ್ರಜೆಗಳು ವಿಶಾಲ ಮನೋಭಾನವೆಯನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಕ್ರೈಸ್ತ ಬಾಂಧವರು ನನ್ನ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈಡೇರಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕ್ರೈಸ್ತ ಸಂಘಟನೆಯ ಜಿಲ್ಲಾ ಪರಿಷತ್ ಅಧ್ಯಕ್ಷ ಪ್ರೇಮ್‍ಕುಮಾರ್ ಮಾತನಾಡಿ, ಹೊನ್ನಾಳಿ ತಾಲ್ಲೂಕು ಕೇಂದ್ರದಲ್ಲಿ ಕ್ರೈಸ್ತ ಸಮಾಜಕ್ಕೆ ಒಂದು ಸಮುದಾಯಭವನ ನಿರ್ಮಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಮುಖ್ಯ ಸಂದೇಶಕಾರ ಪ್ರವಾದಿ ಡೇನಿಯಲ್ ಡೇವಿಡ್, ಪಾಸ್ಟರ್‍ಗಳಾದ ಮಾಲತೇಶ್, ಸುಂದರ್‍ರಾವ್, ಪ್ರಕಾಶ್ ಹಲ್ಮಡಿ ಇತರರು ಇದ್ದರು.