ದಾವಣಗೆರೆ, ಜ. 17- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಇವರ ವತಿಯಿಂದ ನಾಡಿದ್ದು ದಿನಾಂಕ 18 ಮತ್ತು 19 ರಂದು ಎರಡು ದಿನಗಳ ಕಾಲ ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಲ್ಲಾ ಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
1986 ರಲ್ಲಿ ಸ್ಥಾಪಿತವಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಿರಂತರ ಜನಪರ ವಿಚಾರಗಳನ್ನು ಇಟ್ಟುಕೊಂಡು ಅರಿವು ಮೂಡಿಸುವ ಕೆಲಸವನ್ನು ಸಮಾಜದಲ್ಲಿ ಮಾಡುತ್ತಾ ಬಂದಿದೆ ಎಂದರು.
ಸುಮಾರು 12 ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದ್ದು, ಪ್ರಸ್ತುತ 13 ನೇ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಮ್ಮೇಳನದ ಮೊದಲ ದಿನವಾದ ನಾಳೆ ದಿನಾಂಕ 18 ರಂದು ಬೆಳಿಗ್ಗೆ 8.30 ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ನಾಡಿನ ವಿವಿಧ ಮಠಾಧೀಶರು, ಮುರುಘಾ ಮಠದ ಅಧ್ಯಕ್ಷ ಶಿವಯೋಗಿ ಕಳಸದ ಅವರು ಧ್ವಜಾರೋಹಣ ನೆರವೇ ರಿಸುವರು. ಪರಿಷತ್ ಧ್ವಜಾರೋಹಣ ವನ್ನು ಡಾ. ಸಿ. ಸೋಮಶೇಖರ್ ನೆರವೇರಿಸುವರು ಎಂದರು.
ನಾಳೆ (18) ಬೆಳಿಗ್ಗೆ 9.45 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೆದ್ದಾರಿ-50 ರಿಂದ ಆರಂಭಗೊಂಡು ವೇದಿಕೆ ಬಳಿ ಅಂತ್ಯಗೊಳ್ಳಲಿದೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧರಾಮ ಬೇಲ್ದಾಳ ಶರಣರು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಶ್ರೀ ಬಸವಮೂರರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆಂದರು.
ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧರಾಮ ಬೇಲ್ದಾಳ ಶರಣರು ಉಪಸ್ಥಿತರಿರುವರು. ನಿಕಟ ಪೂರ್ವ ಅಧ್ಯಕ್ಷ ಡಾ.ಎಸ್.ಆರ್. ಗುಂಜಾಳ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ. ಪಾಟೀಲ್, ಡಿ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಗೋವಿಂದ ಕಾರಜೋಳ, ಬಿ.ವೈ. ರಾಘವೇಂದ್ರ, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಶಾಸಕ ಎನ್.ವೈ.ಗೋಪಾಲಕೃಷ್ಣ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ಡಾ. ಸಿದ್ಧ ರಾಮ ಬೇಲ್ದಾಳ ಶರಣರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ನಾಡಿನ ಸಾಹಿತಿಗಳು, ಚಿಂತಕರು, ಹೋರಾಟಗಾರರು ಚಿಂತನಾಗೋಷ್ಠಿ ಗಳಲ್ಲಿ ಭಾಗವಹಿಸಿ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು.
ನಾಡಿದ್ದು ದಿನಾಂಕ 19 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಬದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರು ಮಹಾಂತ ಸ್ವಾಮೀಜಿ, ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಬಸವರಾಜ್ ಬೊಮ್ಮಾಯಿ, ಡಾ. ಎಂ.ಪ್ರಭಾಕರ್ ಕೋರೆ ಮತ್ತಿರರು ಭಾಗವಹಿಸಲಿದ್ದಾರೆ. ಡಾ. ಶಿವರಾಜ್ ವಿ. ಪಾಟೀಲ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ. ಸಿದ್ಧರಾಮ ಬೇಲ್ದಾಳ ಶರಣರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ ಎಂದು ಹೇಳಿದರು. ಸಮ್ಮೇಳನದಲ್ಲಿ ಭಾಗವಹಿಸುವ ಆಸಕ್ತರು ಪರಿಷತ್ ಪ್ರಧಾನ ಕಾರ್ಯ ದರ್ಶಿ ಭರ್ಮಪ್ಪ ಮೈಸೂರು (99003 69585) ಇವ ರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಹೆಚ್.ಕೆ.ಲಿಂಗರಾಜ್, ಮೈಸೂರು ಭರ್ಮಪ್ಪ, ಎನ್.ಎಸ್. ರಾಜು ಉಪಸ್ಥಿತರಿದ್ದರು.