ದಾವಣಗೆರೆ, ಜ.17- ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ ಗಳ ಒಕ್ಕೂಟ ಬೆಂಗಳೂರು ಇವರ ವತಿಯಿಂದ ನಾಡಿದ್ದು ದಿನಾಂಕ 19 ರ ಭಾನುವಾರ ಬೆಳಿಗ್ಗೆ 9 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಜನಾಂಗದ ರಾಜ್ಯಮಟ್ಟದ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ, ಸಂತ ಸಂದೇಶ, ವಿಚಾರಗೋಷ್ಠಿ ಮತ್ತು ಸಾಧಕರ ಸನ್ಮಾನ ಸಮಾರಂಭ ಜರುಗಲಿದೆ ಎಂದು ಸಂಘದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೇ. 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಪ್ರತಿ ಜಿಲ್ಲೆಯ ತಲಾ ಮೂರು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂತ ಸಂದೇಶ, ಅಲೆ ಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಬದುಕು ಮತ್ತು ಭವಿಷ್ಯದ ಚಿಂತನೆಗಳು ಎಂಬ ವಿಚಾರಗೋಷ್ಠಿ, ಸಾಧಕರಿಗೆ `ಸಾಧಕ ರತ್ನ’ ಪ್ರಶಸ್ತಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿ ಸುವರು. ಸಚಿವ ಶಿವರಾಜ್ ತಂಗಡಗಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ ಎಂದು ಹೇಳಿದರು.
ಶಾಸಕ ಬಿ.ಪಿ. ಹರೀಶ್
ಒಕ್ಕೂಟದ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಒಕ್ಕೂಟದ ರಾಜ್ಯಾಧ್ಯಕ್ಷ ಎಂ. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿ.ಪಂ.ಮಾಜಿ ಅಧ್ಯಕ್ಷ ಸಿ. ಮಹಾಲಿಂಗಪ್ಪ, ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತುಕಾರಾಮ್ ಸುರ್ವೆ ಭಾಗವಹಿಸಲಿದ್ದಾರೆ.
ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಬೆಂಗಳೂರು ನೆಲಮಂಗಲದ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನದ ಶ್ರೀ ಬಸವ ರಾಮಾನಂದ ಸ್ವಾಮೀಜಿ, ಬೆಂಗಳೂರು ಆಂಧ್ರಹಳ್ಳಿ ಶ್ರೀ ರಂಗಸ್ವಾಮಿ ಆಶ್ರಮ ದೊಂಬಿದಾಸರ ಸಮುದಾಯದ ಶ್ರೀ ಕರುಣಾಕರ ಸ್ವಾಮಿ, ಹಂಡಿಬಡಂಗನಾಥ ಮಠದ ಶ್ರೀ ಸಾಗರನಾಥಜೀ, ಬೀದರ್ ಹುಮನಾಬಾದ್ ದುಮ್ಮನೂರು ಹೆಳವ ಸಮಾಜದ ಮುಕ್ತಿನಾಥ ಜನ ಕಲ್ಯಾಣ ಟ್ರಸ್ಟ್ ಗುರುಪೀಠದ ಶ್ರೀ ಶಂಕರಲಿಂಗ ಸ್ವಾಮೀಜಿ, ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚಲವಾದಿ ಮಹಾಸಂಸ್ಥಾನದ ಶ್ರೀ ಬಸವ ನಾಗೀದೇವ ಸ್ವಾಮೀಜಿ ಸಂತ ಸಂದೇಶ ನೀಡಲಿ ಎಂದರು.
ಬೆಳಿಗ್ಗೆ 11.30 ಕ್ಕೆ ಶಿವಮೊಗ್ಗ ಕುವೆಂಪು ವಿವಿ ಉಪನ್ಯಾಸಕ, ಎನ್.ಎಸ್.ಎಸ್ ವಿಭಾಗದ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಬದುಕು ಮತ್ತು ಭವಿಷ್ಯದ ಚಿಂತನೆಗಳು ವಿಷಯ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ನಿವೃತ್ತ ಆಯ್ಕೆ ಶ್ರೇಣಿ ಗ್ರಂಥಪಾಲಕರೂ, ಕುವೆಂಪು ವಿವಿ ಸಮಾಜಶಾಸ್ತ್ರ ಅಧ್ಯಯನದ ಉಪನ್ಯಾಸಕ ಡಾ. ವಿಮೋಚನಾ ಅಲೆಮಾರಿ ಜನರ ಭವಿಷಯದ ಚಿಂತನೆಗಳು ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ನಂತರ ಮನೋರಂಜನಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ 5 ಗಂಟೆಗೆ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ರಾಜ್ಯ ಒಕ್ಕೂಟದ ದಾವಣಗೆರೆ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಶಾಸಕರಾದ ಕೆ.ಎಸ್. ಬಸವಂತಪ್ಪ,
ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಅಖಿಲ ಕರ್ನಾಟಕ ಶಿಕ್ಕಲಿಗರ ಸಮಾಜ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷ ದಶರಥ ವಾಲಿ, ಕರ್ನಾಟಕ ರಾಜ್ಯ ಬೈಲ್ ಪತ್ತಾರ್ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಲಕ್ಷಣ ಪತ್ತಾರ್, ಗೊಂದಲಿ ಸಮಾಜದ ಮುಖಂ ಡರೂ, ಗೊಂದಲಿ ಐಕ್ಯತಾ ವೇದಿಕೆಯ ಸಂಸ್ಥಾಪಕ ಜಿ. ವೀರೇಶ್ ರಾವ್ ಪಾಚಂಗೆ, ಕರ್ನಾಟಕ ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕುಮಾರ್ ವೈ. ಮೈಸೂರು, ಗೋಸಾಯಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎ. ರಾಮು ಗೋಸಾಯಿ, ಕರ್ನಾಟಕ ನಾಥಪಂಥಿ ಮಹಾಸಭಾದ ರಾಜ್ಯಾಧ್ಯಕ್ಷ ನಾರಾಯಣ ರಾವಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಕಲೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಪ್ರಕಾಶ್, ತಿಪ್ಪೇಸ್ವಾಮಿ, ಡಿ. ಏಕಾಂತಪ್ಪ, ಚೌಡೋಜಿರಾವ್ ಲಾಗವೆ, ವೀರೇಶ್ ಪಾಚಂಗಿ ಉಪಸ್ಥಿತರಿದ್ದರು.