ದಾವಣಗೆರೆ, ಜ. 17- ಜವಹಾರ್ ನವೋದಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ನಾಳೆ ಜಿಲ್ಲೆಯ 18 ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಜಿ. ಮಂಜ್ಯಾನಾಯ್ಕ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಹರ ನವೋದಯ ವಿದ್ಯಾಲಯಗಳು ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ವಸತಿಯುತ ಶಾಲೆಗಳಾಗಿರುತ್ತವೆ. ನಾಳೆ 6 ನೇ ತರಗತಿ, 9 ನೇ ತರಗತಿ ಮತ್ತು 11 ನೇ ತರಗತಿ ಪ್ರವೇಶ ಪರೀಕ್ಷೆಗಳ ಮುಖಾಂತರ ಮಕ್ಕಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ನೀಡಲಾಗುತ್ತದೆ.
ಗ್ರಾಮೀಣ ಭಾಗದ 3,4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳು ಗ್ರಾಮೀಣ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲಿದ್ದು, ನಗರದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಾರೆ. ಇಲ್ಲಿ ಗ್ರಾಮೀಣ ಶೇ. 75, ನಗರ ಶೇ. 25, ಬಾಲಕರು ಶೇ.67, ಬಾಲಕಿಯರು ಶೇ. 33 ರಷ್ಟು ತೆಗೆದುಕೊಳ್ಳಲಾಗುತ್ತದೆ.
ಪ್ರಸ್ತುತ ನಾಳೆ ನವೋದಯ ಪರೀಕ್ಷೆಯು ದಾವಣಗೆರೆ 8, ಜಗಳೂರು 2, ಚನ್ನಗಿರಿ 4, ಹರಿಹರ 3, ಹೊನ್ನಾಳಿ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ್, ಕಿರಣ್ ಕುಮಾರ್, ರಾಕೇಶ್, ಮಹೇಂದ್ರ, ರಾಜೇಶ್ ಉಪಸ್ಥಿತರಿದ್ದರು.