ದಾವಣಗೆರೆ, ಜ. 17- ಚಿರಂತನ ಅಕಾಡೆಮಿ ವತಿಯಿಂದ ನಾಡಿದ್ದು ದಿನಾಂಕ 19 ರ ಭಾನುವಾರ ಸಂಜೆ 5.30 ಕ್ಕೆ ನಗರದ ಶಿವಯೋಗ ಮಂದಿರದ ಆವರಣದಲ್ಲಿ `ಚಿರಂತನ ಉತ್ಸವ’ ದಲ್ಲಿ ನೃತ್ಯ, ಸಂಗೀತ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ದೀಪ ಎನ್. ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಕಳೆದ 24 ವರ್ಷಗಳಿಂದ ಸತತವಾಗಿ ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಚಿರಂತನ ಸಂಸ್ಥೆಯ ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ಬೆಂಗಳೂರಿನಿಂದ ಆಗಮಿಸುತ್ತಿರುವ 20ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆಂದರು.
ಅಂದು ಕಿರುತೆರೆ ಹಾಗೂ ನೃತ್ಯ ಕ್ಷೇತ್ರ ದಲ್ಲಿ ಪ್ರಸಿದ್ಧಿ ಪಡೆದಿರುವ ಬೆಂಗ ಳೂರಿನ ಡಾ. ಸಂಜಯ್ ಶಾಂತಾರಾಮರ ಶಿವ ಪ್ರಿಯ ತಂಡ ಶಿವನ ತಾಂಡವದ ವಿವಿಧ ಮುಜುಲುಗಳಾದ `ಆನಂದ ತಾಂಡವ’,`ರುದ್ರತಾಂಡವ’ಮುಂತಾದವುಗಳನ್ನು ರೋ ಮಾಂಚನ, ಭವ್ಯ ನೃತ್ಯ ಸಂಯೋಜನೆಯಲ್ಲಿ 20 ಕಲಾವಿರದು ಪ್ರಸ್ತುತಪಡಿಸಲಿದ್ದಾರೆ.
ಕರುನಾಡ ವೈಭವ ನೃತ್ಯ ರೂಪಕದಲ್ಲಿ ಕರ್ನಾಟಕದ ಪರಂಪರೆಯನ್ನು ಪ್ರತಿನಿಧಿಸುವ ನೃತ್ಯಗಳ ಪ್ರಸ್ತುತಯಿದ್ದು, ವಿಶೇಷವಾಗಿ ಭೂತಕೋಲ ವನ್ನು ಪ್ರಸ್ತುತಪಡಿಸಲಾಗುತ್ತಿದೆ. ವಿದುಷಿ ರಕ್ಷಾ ರಾಜಶೇಖರ್ ನೃತ್ಯ ವಿಲಾಸದಲ್ಲಿ ಭಕ್ತಿಯ ವಿವಿಧ ರೂಪಕಗಳನ್ನು ಅಭಿನಯಿಸಲಿದ್ದಾರೆ. ಇಂಪಾದ ವಾದ್ಯ ಸಂಗೀತವು ಪ್ರೇಕ್ಷಕರನ್ನು ತಣಿಸಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ದೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, 8 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ವೀಣಾ ವಾದಕರಾದ ರೇವತಿ ಕಾಮತ್ ಭಾಗವಹಿಸಲಿದ್ದಾರೆ. ಡಾ. ಸಂಜಯ್ ಶಾಂತಾರಾಮ್ ಅವರಿಗೆ `ಚಿರಂತನ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಪನ್ನ ಮುತಾಲಿಕ್, ಅಲಕಾನಂದ ರಾಮದಾಸ್, ರಕ್ಷಾ ರಾಜಶೇಖರ್ , ವೆಂಕಟೇಶ್ ಉಪಸ್ಥಿತರಿದ್ದರು.