ನಿಂಚನ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಡಿಡಿಪಿಐ ಜಿ.ಕೊಟ್ರೇಶ್
ದಾವಣಗೆರೆ, ಜ. 17- ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೂಡ ಅಷ್ಟೇ ಮುಖ್ಯ ಎಂದು ಡಿಡಿಪಿಐ ಜಿ. ಕೊಟ್ರೇಶ್ ಹೇಳಿದರು.
ಶುಕ್ರವಾರ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನಿಂಚನ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ರೀತಿಯ ಸಂಸ್ಕಾರವನ್ನು ನಿಡೀದಾಗ ಮಕ್ಕಳು ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದರು.
ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಶಿಕ್ಷಣದಷ್ಟೇ ಮನೆಗಳಲ್ಲಿ ಪೋಷಕರು ಉತ್ತಮ ಸಂಸ್ಕಾರದ ಪಾಠ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಕೂಡ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಬಾಲ್ಯದಿಂದಲೇ ನಾಡು ನುಡಿ ಬಗ್ಗೆ ಸದಭಿರುಚಿ ಬರುವ ರೀತಿಯಲ್ಲಿ ನಾಡಾಭಿಮಾನ, ಭಾಷಾಭಿಮಾನ ಕಲಿಸಬೇಕಾಗಿದೆ. ಆಧುನೀಕರಣ, ತಂತ್ರಜ್ಞಾನ, ಜಾಗತೀಕರಣದಲ್ಲಿ ಬಹುಭಾಷೆ ಕೂಡ ಅವಶ್ಯ. ಆದರೆ, ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕಾಗುತ್ತದೆ ಎಂದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಕ್ಕಳ ಕಲಿಕೆ ಉತ್ತಮವಾಗಲಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲ ಅಧಿಕಾರಿಗಳಾದ ಬಿ.ಎಂ.ಚೌಡಪ್ಪ, ಭರತ್ ಎಂ. ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಎಸ್. ನಿಂಗಪ್ಪ, ಶೈಕ್ಷಣಿಕ ನಿರ್ದೇಶಕರಾದ ಶೃತಿ ಇನಾಮ್ದಾರ್, ಮ್ಯಾನೇಜಿಂಗ್ ಡೈರೆಕ್ಟರ್ ರವಿಕುಮಾರ್, ಪತ್ರಕರ್ತ ಚನ್ನವೀರಯ್ಯ, ಪ್ರಾಂಶುಪಾಲ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳು ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.