ವಿನೋಬನಗರ : ಕಾಮಗಾರಿ ಪೂರ್ಣಕ್ಕೆ ಆಗ್ರಹ

ವಿನೋಬನಗರ : ಕಾಮಗಾರಿ ಪೂರ್ಣಕ್ಕೆ ಆಗ್ರಹ

ದಾವಣಗೆರೆ, 16- ಸ್ಥಳೀಯ ವಿನೋಬ ನಗರದ 1ನೇ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಚರಂಡಿಯ ಮೇಲೆ ಕೂಡಲೇ ಕಲ್ಲು ಹೊದಿಸಬೇಕೆಂದು ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ಹೆಚ್‌. ದಿವಾಕರ್‌ ಅವರು ನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.

2024ರ ನ.9ರಂದು ಜನತಾವಾಣಿ ಪತ್ರಿಕೆಯಲ್ಲಿ `ವಿನೋಬ ನಗರದಲ್ಲಿ ಚರಂಡಿ ಕಾಮಗಾರಿ ಅವೈಜ್ಞಾನಿಕ, ಕಳಪೆ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಣೆ ಆದೊಡನೆ, ಗುತ್ತಿಗೆದಾರ ಚರಂಡಿ ಕಾಮಗಾರಿ ಬೇಗನೆ ಮುಗಿಸಿ, ಅದರ ಮೇಲೆ ಕಲ್ಲು ಹೊದಿಸಲು ಇನ್ನೂ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.

ಚರಂಡಿ ಮೇಲೆ ಕಲ್ಲು ಹಾಕದಿರುವುದರಿಂದ ಅದನ್ನು ದಾಟಲು ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಹರಸಾಹಸ ಪಡಬೇಕಾಗಿದೆ ಎಂದು ವಿವರಿಸಿದ್ದಾರೆ.

ಕಾಮಗಾರಿ ಬಿಲ್‌ಗೆ ಸಂಬಂಧಿಸಿದಂತೆ ಇಂಜಿನಿಯರ್‌ಗಳು ಅದನ್ನು ಅಳತೆ ಮಾಡಲು ಬರುತ್ತಿದ್ದಾರೆಯೇ ಹೊರತು, ಕಲ್ಲು ಹಾಕಿಸುವ ಕಾರ್ಯ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಈ ಕಾಮಗಾರಿ ಪೂರ್ಣವಾಗಿಲ್ಲ. ಇದರ ಗುಣಮಟ್ಟವ ಪರೀಕ್ಷಿಸದೇ ಬಿಲ್‌ ಪಾವತಿ ಮಾಡಿದ್ದಲ್ಲಿ, ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರು ಆಗುತ್ತಾರೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!