ಹರಿಹರ, ಜ. 13- ಪಂಚಮಸಾಲಿ ಮಠದಲ್ಲಿ ನಾಳೆ ಸರಳವಾಗಿ ಹರ ಜಾತ್ರಾ ಮಹೋತ್ಸವ ಆಚರಿಸಲಾಗುವುದು ಹಾಗಾಗಿ ಆಹ್ವಾನ ಪತ್ರಿಕೆಯನ್ನು ಮಾಡಿಸಿರುವುದಿಲ್ಲ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ತಿಳಿಸಿದರು.
ಗುರುಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಪಂಚಮಸಾಲಿ ಮಠ ಸ್ಥಾಪನೆ ಆದನಂತರ ಮಠದಲ್ಲಿ ಜಾತ್ರಾ ಪರಂಪರೆಯನ್ನು ಹುಟ್ಟು ಹಾಕಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಹರ ಜಾತ್ರೆಯನ್ನು ಹಮ್ಮಿಕೊಂಡು ಸಮಾಜದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿಕೊಂಡು ಬರಲಾಗಿತ್ತು. ಮಠದ ಆವರಣದಲ್ಲಿ ಎರಡು ಬೃಹತ್ ಕಟ್ಟಡಗಳು ನಿರ್ಮಾಣ ವಾಗುತ್ತಿದ್ದು, ಅವುಗಳ ನಿರ್ಮಾಣ ಸಂಪೂರ್ಣವಾದ ನಂತರ, ಮುಂದಿನ ದಿನಗಳಲ್ಲಿ ಮತ್ತೆ ಹರ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದು ಹೇಳಿದರು.
ಪೀಠದ ಆಡಳಿತ ಅಧಿಕಾರಿ ಡಾ.ರಾಜಕುಮಾರ ಮಾತನಾಡಿ, ಈ ಬಾರಿ ಹರ ಜಾತ್ರೆಯನ್ನು ಮೂರು ಉದ್ದೇಶಗಳೊಂದಿಗೆ ಆಚರಣೆ ಮಾಡುತ್ತಿದ್ದು, ರಾಣಿ ಚೆನ್ನಮ್ಮ ನವರ ದ್ವಿ ಶತಮಾನೋತ್ಸವ, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಸಪ್ತಮ ಪೀಠಾರೋಹಣ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ ತಂಡದ ಪದಗ್ರಹಣ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಬೆಳಗ್ಗೆ ಲಿಂಗೈಕ್ಯ ಶ್ರೀ ಮಹಾಂತ ಸ್ವಾಮಿಗಳ ಗದ್ದಿಗೆ ಮತ್ತು ಹರ ದೇವರಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದು, 11 ಗಂಟೆಗೆ ವೇದಿಕೆಯ ಸಮಾರಂಭ ನಡೆಯಲಿದೆ.
ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹರ ಜಾತ್ರಾ ಮಹೋತ್ಸವದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ರಾಣಿ ಚೆನ್ನಮ್ಮ ನವರ ದ್ವಿಶತಮಾನೋತ್ಸವ ಆಚರಣೆ ಅಂಗವಾಗಿ ಈಗಾಗಲೇ ರಾಜ್ಯದಾದ್ಯಂತ ಸಂಚರಿಸುವ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ, ದಾಸೋಹ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಪಾಟೀಲ್, ಸಮಾಜದ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಪಟ್ಟಣ್ಣ ಶೆಟ್ಟಿ, ಧರ್ಮದರ್ಶಿಗಳಾದ ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೂಜಾರ್, ನಾಗಣ್ಣ ಷಣ್ಮುಖಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ, ಪ್ರಧಾನ ಕಾರ್ಯದರ್ಶಿ ರಶ್ಮಿ ಕುಂಕೋದ್, ರಾಜೇಶ್ವರಿ ಬಳ್ಳಾರಿ, ರಾಜೇಂದ್ರ ಇತರರು ಹಾಜರಿದ್ದರು.