ದಾವಣಗೆರೆ, ಜ.12- ಪಂಜಾಬ್‌ನ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ಸಂಚಾಲಕ, ರೈತ ಹೋರಾಟಗಾರ ಜಗಜಿತ್ ಸಿಂಗ್ ದಲೈವಾಲಾ ಅವರ ಹೋರಾಟವನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಭಾನುವಾರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನಾಕಾರರು, ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. ಪೊಲೀಸರು ಕೂಡಲೇ ದಹಿಸಲಾಗುತ್ತಿದ್ದ ಪ್ರತಿಕೃತಿಯನ್ನು ನಂದಿಸಿದರು.
ಕಳೆದ 45 ದಿನಗಳಿಂದ ಜಗಜಿತ್ ಸಿಂಗ್ ದಲೈವಾಲಾ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದಾಗ್ಯೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ್ರು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಟ ಬೆಂಬಲ ಬೆಲೆಗಾಗಿ ಕಳೆದ ಫೆಬ್ರವರಿಯಿಂದ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರವು ದಲೈವಾಲಾ ಅವರ ಮನವಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ದಲೈವಾಲಾ ಅವರ ಪ್ರಾಣ ಉಳಿಸಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿಗೆ ತರಬೇಕು ಒಂದು ಒತ್ತಾಯಿಸಿದರು.
ರೈತರನ್ನು ನಿರ್ಲಕ್ಷಿಸಿ ಈಗಾಗಲೇ ಕೇಂದ್ರ ಬಿಜೆಪಿ ಸರ್ಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ಪೆಟ್ಟು ತಿಂದಿದೆ. ಕಳೆದ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಿದ್ದ ಬಿಜೆಪಿ ಸರ್ಕಾರ, ಈ ಬಾರಿ ಚುನಾವಣೆಯಲ್ಲಿ ಕಿಚಡಿ ಸರ್ಕಾರ ರಚಿಸಿದೆ. ಇದೇ ರೀತಿ ರೈತ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಪಚಡಿ ಸರ್ಕಾರವಾಗಲಿದೆ ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಘೋಷಣೆ ಕೂಗಲಾಯಿತು.
ಹಸಿರು ಸೇನೆ ಅಧ್ಯಕ್ಷ ಕರಿಬಸಪ್ಪ ಗೌಡ, ನಿಟುವಳ್ಳಿಯ ಅಂಜಿನಪ್ಪ ಪೂಜಾರ್, ಬಸವ ನಗೌಡ್ರು, ಮಿಯ್ಯಾಪುರದ ತಿರುಮಲೇಶ್, ಗುರುಮೂರ್ತಿ, ವಿ.ಹೆಚ್. ಸೋಮಗೊಂಡ, ದಶರಥ, ಜಯಾನಾಯ್ಕ, ಕರಿಬಸಪ್ಪ ಬೆಳವ ನೂರು ಇತರರು ಪ್ರತಿಭಟನೆಯಲ್ಲಿದ್ದರು.