162ನೇ ಸ್ವಾಮಿ ವಿವೇಕಾನಂದ ಜಯಂತಿ, ನಗರದಲ್ಲಿ ಸಂಭ್ರಮದ ಶೋಭಾಯಾತ್ರೆ
ದಾವಣಗೆರೆ, ಜ.12- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮಿ ವಿವೇಕಾ ನಂದರ 162ನೇ ಜಯಂತಿ ಪ್ರಯುಕ್ತ ಭಾನುವಾರ ನಗರದಲ್ಲಿ ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.
ಮಾಗನೂರು ಬಸಪ್ಪ ಕಾಲೇಜಿನ ಪ್ರಾಚಾರ್ಯ ಪ್ರಸಾದ್ ಬಂಗೇರ ಅವರು ಜಯದೇವ ವೃತ್ತದಲ್ಲಿ ಬೆಳಗ್ಗೆ ಶೋಭಾಯಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಸ್ವಾಮಿ ವಿವೇಕಾನಂದರಿಗೆ ಹಾಕುವ ಜೈಕಾರಗಳು ಹಾಗೂ ಅಲಂಕಾರಗೊಂಡ ಸ್ವಾಮಿ ವಿವೇಕಾನಂದರ ಭಾವಚಿತ್ರ ಯಾತ್ರೆ ಸೊಬಗನ್ನು ಹೆಚ್ಚಿಸಿತ್ತು.
ಇದೇ ವೇಳೆ ಮಾತನಾಡಿದ ಪ್ರಸಾದ್ ಬಂಗೇರ ಅವರು, ದೇಶದ ಅಭಿವೃದ್ಧಿಗೆ ಯುವಕರ ಶಕ್ತಿ ಬಹಳ ಮುಖ್ಯ. ದೇಶದ ಅಭಿವೃದ್ಧಿ ಮತ್ತು ಪ್ರಗತಿ ಯುವಕರ ಕೊಡುಗೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.
ಯುವ ಸಮೂಹದ ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿದವರಲ್ಲಿ ಸ್ವಾಮಿ ವಿವೇಕಾನಂದರೇ ಮೊದಲಿಗರು. ಇವರು ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಆಗಿದ್ದಾರೆ ಎಂದು ಅವರನ್ನು ಸ್ಮರಿಸಿದರು.
ವಿವೇಕಾನಂದರು ತಮ್ಮ ಆಲೋಚನೆ ಹಾಗೂ ಚಿಂತನೆ ಗಳಿಂದ ಯುವಕರನ್ನು ಒಗ್ಗೂಡಿಸಲು ಬಯಸಿದವರು ಎಂದ ಅವರು, ವಿವೇಕರ ಸವಿ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಜ.12ರಂದು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
1984ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. 1985ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್, ನಗರ ಕಾರ್ಯದರ್ಶಿ ಅಲೋಕ್, ಎನ್. ವೀರೇಶ್, ನಗರ ಸಹ ಕಾರ್ಯದರ್ಶಿ ತನೋಜ್, ವಿಭಾಗ ಪ್ರಮುಖ ರಾಜಶೇಖರ್, ರಾಷ್ಟ್ರೋತ್ಥಾನ, ಸಿದ್ದಗಂಗಾ, ವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಇದ್ದರು.