ಹಳ್ಳಿ ಮಕ್ಕಳು ಐಎಎಸ್ ಮಾಡಬೇಕೆಂಬುದು ನನ್ನ ಕನಸು

ಹಳ್ಳಿ ಮಕ್ಕಳು ಐಎಎಸ್ ಮಾಡಬೇಕೆಂಬುದು ನನ್ನ ಕನಸು

ಜಿ.ಬಿ. ವಿನಯ್ ಕುಮಾರ್

ಚನ್ನಗಿರಿ, ಜ. 12 – ಗ್ರಾಮೀಣ ಪ್ರದೇಶದ ಹಾಗೂ ಸಣ್ಣ ಪಟ್ಟಣದ ಮಕ್ಕಳು ಐಎಎಸ್‌ನಂತಹ ಉನ್ನತ ಉದ್ಯೋಗ ಪಡೆಯಬೇಕೆಂಬುದೇ ನನ್ನ ಕನಸು. ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮಾಚನಾಯಕನಹಳ್ಳಿ ಕಾವಲು ಗ್ರಾಮದ ಸಿವಿಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಸಿವಿಎಸ್ ಪರ್ವ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ಮಕ್ಕಳು ವಂಚಿತರಾಗುತ್ತಿದ್ದಾರೆ. ಈ ಮಕ್ಕಳೂ ಐಎಎಸ್ ಓದುವಂತಾಗಬೇಕು. ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತಾಗಬೇಕು ಎಂದು ಹೇಳಿದರು.

ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಸಾಕು ಎಂಬ ಮನೋಭಾವನೆ ಪ್ರತಿಯೊಬ್ಬ ಪೋಷಕರಲ್ಲಿಯೂ ಇರುವುದು ಸರಿಯಲ್ಲ. ಮಕ್ಕಳನ್ನು ಪ್ರತಿಭಾವಂತರನ್ನಾಗಿಸಿ, ಬುದ್ದಿವಂತರನ್ನಾಗಿ ಮಾಡಿ ಎಂಬ ಜವಾಬ್ದಾರಿಯನ್ನು ಶಾಲೆ ಮತ್ತು ಶಿಕ್ಷಕರ ಮೇಲೆ ಹಾಕಿ ನುಣುಚಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಈ ರೀತಿ ಮಾಡಿದರೆ ಮಕ್ಕಳು ಪ್ರತಿಭಾವಂತರಾಗಲು ಸಾಧ್ಯವಿಲ್ಲ. ಮನೆಯಲ್ಲಿಯೂ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ನಾನು ದಾವಣಗೆರೆಯ ಕಕ್ಕರಗೊಳ್ಳದ ದನದ ಕೊಟ್ಟಿಗೆಯಲ್ಲಿ ಬೆಳೆದವನು. ಜವಾಹಾರ್ ನವೋದಯ ವಿದ್ಯಾಲಯದಲ್ಲಿ ಓದಿದ್ದೆ. ಬಡತನ ಕಾರಣದಿಂದ ಒಳ್ಳೆಯ ಶಿಕ್ಷಣ ಸಿಗಲಿಲ್ಲ. ಬಡತನ ಮನೆಯಲ್ಲಿ ಇದ್ದರೂ ಸಂಸ್ಕೃತಿ ಇರಬೇಕು. ಮನೆಯಲ್ಲಿ ಪುಸ್ತಕಗಳ ಸಂಗ್ರಹವಿರಬೇಕು. ನೀವು ಸ್ವಯಂಪ್ರೇರಿತರಾಗಿ ಪುಸ್ತಕ ಓದಿದರೆ ಮಕ್ಕಳೂ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಕಥೆ, ಸಾಮಾನ್ಯ ಜ್ಞಾನ, ಇತಿಹಾಸ, ಪುರಾಣಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಖರೀದಿಸಿ ಪೋಷಕರು ಓದುವ ಹವ್ಯಾಸ ಹೊಂದಿದ್ದರೆ, ಮಕ್ಕಳು ಇದನ್ನು ಪಾಲಿಸುತ್ತಾರೆ ಎಂದು ಕಿವಿಮಾತು ಹೇಳಿದರು.

ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡು ತಯಾರಾದೆ. ಕೇವಲ 2 ಅಂಕಗಳಿಂದ ರಾಂಕ್ ಕೈತಪ್ಪಿ ಹೋಯಿತು. ಆ ಬಳಿಕ ಕೆಎಎಸ್ ಅಧಿಕಾರಿಯಾದೆ. ಎರಡು ವರ್ಷ ಪಿಡಿಒ ಆಗಿ ಕೆಲಸ ಮಾಡಿದೆ. ಆ ಬಳಿಕ ತನ್ನದೇ ಆದ ಸಂಸ್ಥೆ ಹುಟ್ಟು ಹಾಕಿದೆ. 40 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯು ಇಂದು 10 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಸಾವಿರಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ರೂಪುಗೊಳ್ಳುವಂತಾಗಲು ಕಾರಣವಾಗಿದ್ದೇ ಪುಸ್ತಕ ಓದುವ ಬಗ್ಗೆ ಇದ್ದ ಪ್ರೀತಿ ಎಂದು ತಿಳಿಸಿದರು.

ಹೆಚ್ಚಾಗಿ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವುದರಿಂದ  ಸಾಮಾನ್ಯ ಜ್ಞಾನ ಬೆಳೆಯುತ್ತದೆ. ಸಂಸ್ಕೃತಿಯೂ ಬರುತ್ತದೆ. ಆಗ ನೀವು ಯಾರ ಕೈಕಾಲು ಹಿಡಿಯಬೇಕಿಲ್ಲ. ಸ್ವಾವಲಂಬಿಗಳಾಗಬಹುದು. ಒಂದು ವರ್ಷದಿಂದ 12ವರ್ಷದವರೆಗೆ ಮಕ್ಕಳು ತಂದೆ, ತಾಯಿಯನ್ನು ರೋಲ್ ಮಾಡೆಲ್ ಆಗಿ ನೋಡ್ತಾರೆ. ಹಾಗಾಗಿ, ಮಕ್ಕಳ ಮುಂದೆ ಎಚ್ಚರಿಕೆಯಿಂದ ವರ್ತಿಸಬೇಕು. ಮಕ್ಕಳ ಮನಸ್ಸು ಕದಡಿದರೆ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಭವಿಷ್ಯವೇ ಹಾಳಾಗಿ ಹೋಗುತ್ತದೆ ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆ ಎದುರಿಸುವುದು ಸಾಮಾನ್ಯ ಅಲ್ಲ. ಸಾಮಾನ್ಯ ಕುಟುಂಬದಿಂದ ಬಂದವನು. ಶಾಸಕ, ಸಂಸದರು, ಮುಖ್ಯಮಂತ್ರಿ ಬೆಂಬಲ ಇರಲಿಲ್ಲ. 43 ಸಾವಿರ ಜನರು ಮೊದಲ ಪ್ರಯತ್ನದಲ್ಲಿಯೇ ಮತ ಹಾಕಿದರು. ಸ್ವಲ್ಪ ಹೆಚ್ಚು ಪ್ರಯತ್ನ ಪಟ್ಟಿದ್ದರೆ ಇನ್ನೂ ಜಾಸ್ತಿ ಮತಗಳು ಬರುತ್ತಿದ್ದವು ಎಂದು ತಿಳಿಸಿದರು.  

ಐಎಎಸ್ ಅಧಿಕಾರಿಗಳಾಗಬೇಕು. ಬೇರೆಯವರಿಗೆ ಕೆಲಸ ಕೊಡುವ ಉದ್ಯಮಿಯಾಗಬೇಕು. ನಾಯಕತ್ವ ಗುಣ ಇರಬೇಕು. ಆಗ ಸ್ವಾಭಿಮಾನದ ಜೊತೆಗೆ ಸ್ವಾವಲಂಬನೆ ಸಾಧಿಸಬಹುದು. ಇನ್ನೊಬ್ಬರ ಬಳಿ ಹೋಗಿ ಗುಲಾಮರಾಗುವುದು ತಪ್ಪುತ್ತದೆ. ಮತ್ತೊಬ್ಬರ ಮುಂದೆ ಕೈಯೊಡ್ಡಬಾರದು. ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಇದಕ್ಕೆ ಅವಕಾಶ ಕೊಡಬೇಡಿ. ಮಕ್ಕಳು ಸ್ವತಂತ್ರರಾಗಿ ಬದುಕಿನಲ್ಲಿ ಮುಂದೆ ಬರುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಸಿವಿಎಸ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಸಿ. ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಡಿ.ಆರ್. ರೂಪ, ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಸ್ಯಾಮ್ ವರ್ಗೀಸ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಕುಮಾರ್, ಸಿವಿಎಸ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಜಿ. ಅರುಣ್, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು. 

error: Content is protected !!