ಪ್ರೊ. ವಿದ್ಯಾಧರ ವೇದವರ್ಮ
ದಾವಣಗೆರೆ, ಜ.12- ಸ್ತ್ರೀ ಸಮಾನತೆ, ಸ್ತ್ರೀ ಹಕ್ಕುಗಳ ರಕ್ಷಣೆ ಸಂವಿಧಾನದ ಆಶಯ ವಾಗಿದ್ದು, ಇದಕ್ಕೆ ಮಾತೆ ಸಾವಿತ್ರಿ ಬಾಯಿ ಪುಲೆ ಅವರು ಅಡಿಪಾಯ ಹಾಕಿದರು ಎಂದು ಆರ್.ಎಲ್. ಕಾಲೇ ಜಿನ ಪ್ರಾಧ್ಯಾಪಕ ವಿದ್ಯಾಧರ ವೇದವರ್ಮ ತಿಳಿಸಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ಕರೆಯಲ್ಪ ಡುವ ಸಾವಿತ್ರಿ ಬಾಯಿ ಪುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ತನ್ನ ಜೀವನದುದ್ದಕ್ಕೂ ದಣಿವರಿಯದ ಹೋರಾಟ ನಡೆಸಿದರು. ಅವರು ತಳ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರನ್ನು ವಿದ್ಯಾವಂತರನ್ನಾಗಿಸಲು ರಾತ್ರಿ ಶಾಲೆ ಸ್ಥಾಪಿಸಿದ ಕೀರ್ತಿ ಪುಲೆ ಅವರಿಗೆ ಸಲ್ಲುತ್ತದೆ. ಅಂದು ಅವರ ಹೋರಾಟದ ಫಲವಾಗಿ ಇಂದು ಭಾರತದ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆ ಪಡೆಯುವಂತಾಗಿದೆ ಎಂದರು. ಈ ಸಂದರ್ಭ ದಲ್ಲಿ ಜಿಲ್ಲಾ ಸಂಚಾಲಕ ಲಕ್ಷ್ಮಣ್ ರಮಾವತ, ತಾಲ್ಲೂಕು ಸಂಚಾಲಕ ಹನುಮಂತಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜಪ್ಪ ಉಪಸ್ಥಿತರಿದ್ದರು.