ಕಾಮಗಾರಿ ಸಂಪೂರ್ಣ ಕಳಪೆ ಆಗಿದ್ದು, ಇದರಲ್ಲಿ ಶಾಸಕರದ್ದು ತಪ್ಪಿಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರ ನಿರ್ಲಕ್ಷ್ಯದಿಂದ ಈ ಕಳಪೆ ರಸ್ತೆ ನಿರ್ಮಾಣವಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು.
ಇಲ್ಲದಿದ್ದರೇ ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್ ಸಿಟಿ ಆಯುಕ್ತರಿಗೆ ಪತ್ರ ಬರೆಯಲಿದ್ದೇನೆ ಎಂದು ಕೆ.ಎಂ. ವೀರೇಶ್ ಎಚ್ಚರಿಕೆ ನೀಡಿದ್ದಾರೆ.
75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಹಾಗೂ ಚರಂಡಿ ಹೊದಿಕೆ ಕಾಮಗಾರಿಯಲ್ಲೂ ಗುಣಮಟ್ಟವಿಲ್ಲ.
– ಕೆ.ಎಂ. ವೀರೇಶ್., ಪಾಲಿಕೆ ಸದಸ್ಯ
ದಾವಣಗೆರೆ, ಜ.7- ನಗರದ ಶಿವಕುಮಾರ ಬಡಾವಣೆಯ 1ನೇ ಹಂತದ 2ನೇ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಸಿಸಿ ರಸ್ತೆಯಲ್ಲಿ ಬಿರುಕುಗಳು ಗೋಚರಿಸಿರುವುದರಿಂದ ಅಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಆರೋಪಿಸಿದ್ದಾರೆ.
ಹದಡಿ ರಸ್ತೆಗೆ ಲಿಂಕ್ ಆಗಿರುವ ಈ ರಸ್ತೆಯು ನಂಜಪ್ಪ ಆಸ್ಪತ್ರೆಯ ಮುಂಭಾಗದಿಂದ ನಿಟ್ಟುವಳ್ಳಿ ಮುಖ್ಯ ರಸ್ತೆಯ ವರೆಗೂ `ವೈಟ್ ಟ್ಯಾಪಿಂಗ್’ ಮಾದರಿಯಲ್ಲಿ ಅರ್ಧ ಕಿ.ಮೀ ನಿರ್ಮಾಣವಾಗಿದ್ದು, ಈ ರಸ್ತೆ ಅವೈಜ್ಞಾನಿಕವಾಗಿದೆ ಎಂದು ಅಲ್ಲಿನ ಸ್ಥಳೀಯರು ದೂರುತ್ತಿದ್ದಾರೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಅನುದಾನದಡಿ 75 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದ್ದು, ರಸ್ತೆ ನಿರ್ಮಾಣಗೊಂಡು ಒಂದೂವರೆ ತಿಂಗಳೂ ಆಗಿಲ್ಲ. ಆಗಲೇ ಈ ರಸ್ತೆ ಬಿರುಕು ಬಿಟ್ಟಿದೆ, ಅಲ್ಲದೆ ಚರಂಡಿ ಎತ್ತರಿಸಿ, ಅದರ ಮೇಲೆ ಕಲ್ಲು ಹೊದಿಸುವ ಕೆಲಸದಲ್ಲೂ ಕಳಪೆ ಆಗಿರುವುದು ಸಾಬೀತಾಗಿದೆ.
ಉತ್ತಮವಾಗಿದ್ದ ಡಾಂಬರ್ ರಸ್ತೆ ಮೇಲೆಯೇ ಈ ರಸ್ತೆ ಮಾಡಿದ್ದಾರೆ. ಸಿಸಿ ರಸ್ತೆಗೆ ಕಡಿಮೆ ಸಿಮೆಂಟ್ ಬಳಕೆ ಮಾಡಿರುವುದು ಮತ್ತು ಸರಿಯಾಗಿ ಕ್ಯೂರಿಂಗ್ ಮಾಡದಿರುವುದರಿಂದ ಇಲ್ಲಿ ಕಳಪೆ ಆಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನೂತನ ರಸ್ತೆ ನಿರ್ಮಿಸುವ ಪೂರ್ವದಲ್ಲಿ ಮೊದಲಿದ್ದ ರಸ್ತೆಯನ್ನು ಅಗೆದು-ತೆಗೆದು, ಗ್ರಾವೆಲ್ ಬಳಸಿ ರೂಲರ್‌ನಿಂದ ರಸ್ತೆ ಗಟ್ಟಿಗೊಳಿಸಿದ ಬಳಿಕ ಕಾಂಕ್ರೀಟ್ ರಸ್ತೆ ಮಾಡಬೇಕಿತ್ತು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.