ಟೆಂಟ್ ಮುಕ್ತ ರಾಜ್ಯ : ಅಲೆಮಾರಿ ಅಭಿವೃದ್ಧಿ ನಿಗಮದ ಗುರಿ

ಟೆಂಟ್ ಮುಕ್ತ ರಾಜ್ಯ : ಅಲೆಮಾರಿ ಅಭಿವೃದ್ಧಿ ನಿಗಮದ ಗುರಿ

ಹೊನ್ನಾಳಿಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ

ಹೊನ್ನಾಳಿ, ಡಿ. 22- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗದವರು ಇನ್ನು ಟಂಟ್‍ಗಳಲ್ಲಿ ವಾಸಿಸುತ್ತಿದ್ದು, ಅಲೆಮಾರಿ ಜನಾಂಗಕ್ಕೆ ಸೂಕ್ತ ನಿವೇಶನದೊಂದಿಗೆ ವಾಸಿಸಲು ಮನೆ ನಿರ್ಮಾಣ ಮಾಡಿ ಕರ್ನಾಟಕವನ್ನು ಟೆಂಟ್‍ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಇದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.

ಶುಕ್ರವಾರ ಪಟ್ಟಣದ ಸಮೀಪದಲ್ಲಿರುವ ದೇವನಾಯ್ಕಹಳ್ಳಿಯ ಖಾಸಗಿ ಸ್ಥಳದ ಟೆಂಟ್‍ನಲ್ಲಿ ವಾಸಿಸುವ ಅಲೆಮಾರಿ ಕುಟುಂಬಗಳ ಸ್ಥಿತಿಗತಿ ಪರಿಶೀಲಿಸಿದ ನಂತರ, ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊನ್ನಾಳಿ ತಾಲೂಕು ಕೇಂದ್ರದ ಸಮೀಪದ ದೇವನಾಯ್ಕನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿಗಳ 45 ಕುಟುಂಬಗಳ 202 ಜನಸಂಖ್ಯೆ ಹೊಂದಿದೆ. ಕಳೆದ 30 ವರ್ಷಗಳಿಂದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದೆ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು,  ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು  ರಾಜ್ಯ, ತಾಲ್ಲೂಕುಗಳಲ್ಲಿ ಈ ಜನಾಂಗದ ಸ್ಥಿತಿಗತಿ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ  ಸಂಚರಿಸಿ ಅಲೆಮಾರಿ ಜನಾಂಗದ ಸಮಗ್ರ ಚಿತ್ರಣವನ್ನು ತಯಾರಿಸಿ, ವರದಿಯನ್ನು ಸರ್ಕಾರಕ್ಕೆ ತಲುಪಿಸಿ ಅವರಿಗೊಂದು ಸೂರಿನ ವ್ಯವಸ್ಥೆ ಕಲ್ಪಿಸುವುದು ನಿಗಮದ ಕಾರ್ಯವಾಗಿದೆ ಎಂದರು. 

ನಿಗಮದ ಮೊದಲ ಅಧ್ಯಕ್ಷೆಯಾಗಿದ್ದು ಇದೇ ನಿಗಮದ ಜನಾಂಗಕ್ಕೆ ಒಳಪಡುವ ನಾನು ನಿಗಮದ ಬಗ್ಗೆ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವೆ. ನಿಗಮದಲ್ಲಿ 51 ಪರಿಶಿಷ್ಠ, 23 ಪರಿಶಿಷ್ಠ ಪಂಗಡ, 25 ಆದಿವಾಸಿ ಅಲೆಮಾರಿಗಳು ಸೇರಿದಂತೆ 99 ಸಮುದಾಯಗಳು ನಿಗಮದಡಿ ಬರುತ್ತವೆ ಎಂದು ತಿಳಿಸಿದರು.

ದಕ್ಕಲಿಗ, ಬುಡ್ಗಜಂಗಮ, ಶಿಳ್ಳೆಕ್ಯಾತ, ಸುಡುಗಾಡ ಸಿದ್ದ, ಚನ್ನದಾಸರ ಸೇರಿದಂತೆ ಒಟ್ಟು 51 ಪರಿಶಿಷ್ಟ ಜಾತಿ ಅಲೆಮಾರಿಗಳು, ಹಕ್ಕಿಪಿಕ್ಕಿ, ಗೌಡಾಲು, ರಾಜಗೊಂಡ, ಹಸಲರು ಸೇರಿದಂತೆ ಒಟ್ಟು 23 ಪರಿಶಿಷ್ಟ ಪಂಗಡದ ಅಲೆ ಮಾರಿಗಳು ಹಾಗೂ ಜೇನುಕುರುಬ, ಕೊರಗ, ಸೋಲಿಗ, ಕಾಡು ಕುರುಬ ಸೇರಿದಂತೆ ಒಟ್ಟು 48 ಪರಿಶಿಷ್ಟ ಪಂಗಡದ ಅರಣ್ಯ ಆದಿ ವಾಸಿಗಳು ರಾಜ್ಯದು ದ್ದಕ್ಕೂ ಟೆಂಟ್‍ನಲ್ಲಿ ಬದುಕುತ್ತಿದ್ದಾರೆ. ಸರ್ಕಾರ ಇವರ ಬದುಕಿನ ಬಂಡಿ ಸಾಗಿಸಲು ಸಹಾಯ ಮಾಡಲು ಸಿದ್ದವಾಗಿದೆ ಎಂದು ಹೇಳಿದರು.

ಅಲೆಮಾರಿ ಜನಾಂಗದಲ್ಲಿ ಶಿಕ್ಷಣ ಇಲ್ಲದೆ ಅಂಧಾಭಿಮಾನ, ಮೂಢನಂಬಿಕೆ ತುಂಬಿ ತುಳುಕುತ್ತಿದ್ದು, ಅಕ್ಷರಭ್ಯಾಸಕ್ಕಾಗಿ ರಾತ್ರಿ ವೇಳೆ ಅನೌಪಚಾರಿಕ ಶಿಕ್ಷಣ ವ್ಯವಸ್ಥೆ ಮಾಡಲಾಗು ವುದು, ಅವರಿಗೆ ಶಾಶ್ವತ ಸೂರಿನ ವ್ಯವಸ್ಥೆಯಾದ ಮೇಲೆ ಅವರು ಒಂದು ಕಡೆ ನೆಲೆ ನಿಂತು ಕುಟುಂಬದ ಮಕ್ಕಳಿಗೆ ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

1871ರಲ್ಲಿ ಬ್ರಿಟೀಷರು ಈ ಅಲೆಮಾರಿ ಜನಾಂಗವನ್ನು ಬಯಲು ಬಂಧಿ ಖಾನೆಯಲ್ಲಿ ಇರಿಸಿದ್ದರು, ಇದಕ್ಕೆ ಕಾರಣ ಬ್ರಿಟಿಷರ ದಬ್ಬಾಳಿಕೆಯನ್ನು ಈ ಅಲೆಮಾರಿ ಜನಾಂಗ ವಿರೋಧಿಸಿತ್ತು ಎಂದ ಅವರು, ಪ್ರಕೃತಿ ಕಾಪಾಡುವವರು ಅಲೆಮಾರಿಗಳಾಗಿದ್ದರೆಂದರು.

ಅಲೆಮಾರಿ ಜನಾಂಗದ ಸಮಗ್ರ ಚಿತ್ರಣದ ಹೊತ್ತಿಗೆ ತಯಾರಿಸಿ ಡಿ.26, 27 ರಂದು ಬೆಳಗಾವಿ ನಗರದಲ್ಲಿ ನಡೆಯುವ ಎಐಸಿಸಿ ಸಭೆಯ ಮುಂದಿಟ್ಟು, ಕೆಪಿಸಿಸಿ ಅಧ್ಯಕ್ಷ ಹಾಗೂ ಎಐಸಿಸಿ ಅಧ್ಯಕ್ಷರುಗಳ ಗಮನ ಸೆಳೆದು ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ತಹಶೀಲ್ದಾರ್ ಪಟ್ಟರಾಜಗೌಡ, ತಾ.ಪಂ. ಇಒ ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ಉಮಾ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಆರ‍್‌ಐ ರಮೇಶ್, ವಿ.ಎ. ಜಯಪ್ರಕಾಶ,  ಭೋಜಾ ಇನ್ನಿತರರಿದ್ದರು.

error: Content is protected !!