ದಾವಣಗೆರೆ, ಡಿ. 22 – ಜಿಲ್ಲೆಯಲ್ಲಿ ರೈತರು ಬೇಸಿಗೆ ಹಂಗಾಮಿಗಾಗಿ ಭತ್ತದ ಬೀಜ ಚೆಲ್ಲುವ ಭರಾಟೆ ಜೋರಾಗಿದೆ. ಕೆಲವು ರೈತರು ಭೂಮಿ ಉಳುಮೆ ಮಾಡಿಕೊಂಡು, ಹದಗೊಳಿಸಿ, ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲು ಭತ್ತದ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ಇದುವರೆಗೂ ಜಿಲ್ಲಾಡಳಿತವಾಗಲಿ ಅಥವಾ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ನೀರು ಬಿಡುವ ಬಗ್ಗೆ ಚಕಾರವೆತ್ತಿಲ್ಲ. ತಕ್ಷಣವೇ ಐ.ಸಿ.ಸಿ ಸಭೆ ಕರೆದು ನೀರು ಬಿಡುವ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಆಗ್ರಹಿಸಿದ್ದಾರೆ.
ಪ್ರಸ್ತುತ ಡ್ಯಾಂ ತುಂಬಿದ್ದು, 183 ಅಡಿ ನೀರಿನ ಮಟ್ಟ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನು ಮಳೆಯಾಗುವ ಸಂಭವವಿದೆ. ಆದರೂ ಜಿಲ್ಲಾಡಳಿತ ಈ ಬಗ್ಗೆ ದಿವ್ಯ ಮೌನಕ್ಕೆ ಶರಣಾಗಿದೆ. ರೈತರಿಗೆ ತಕ್ಷಣ ನೀರು ಬೇಕು. ಕಾಲುವೆಯಲ್ಲಿ ನೀರು ಹರಿಸಿದ್ರೆ ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಅನುಕೂಲವಾಗುತ್ತದೆ ಎಂದವರು ಹೇಳಿದ್ದಾರೆ.
ಉತ್ತಮ ಮಳೆಯಾಗುವ ಹವಾಮಾನ ಇಲಾಖೆ ಮುನ್ಸೂಚನೆ ಇರುವುದರಿಂದ ಈ ಬಾರಿ ಬೇಸಿಗೆ ಹಂಗಾಮು ಭತ್ತದ ಕೃಷಿಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುತ್ತಿದ್ದಾರೆ.
ಡ್ಯಾಂನಲ್ಲಿ ನೀರು ಸಂಗ್ರಹ ಇದ್ದರೂ ನೀರು ಹರಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ರೈತ ವಿರೋಧಿ ಧೋರಣೆ ಎಂದು ಸತೀಶ್ ಖಂಡಿಸಿದ್ದಾರೆ.