ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್
ಚನ್ನಗಿರಿ, ಡಿ. 22 – ಕಡಲೆ ಪ್ರಮುಖವಾದ ದ್ವಿದಳ ಧಾನ್ಯ ಬೆಳೆಯಾಗಿದ್ದು, ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಅಧಿಕ ಇಳುವರಿ ಕೊಡುವ ತಳಿಗಳ ಪರಿಚಯ ಅಗತ್ಯವಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲ್ಲೂಕು ಭೀಮನೆರೆ ಗ್ರಾಮದಲ್ಲಿ ಕಡಲೆ ಬೆಳೆಯಲ್ಲಿ ಯಾಂತ್ರೀಕೃತ ಕಟಾವಿಗೆ ವಿವಿಧ ತಳಿಗಳ ಕ್ಷೇತ್ರ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಯಾಂತ್ರೀಕೃತ ಕಟಾವಿಗೆ ಸೂಕ್ತವಾದ ತಳಿಯಾದ NBeG-776 ಮತ್ತು ಪುಲೆ ವಿಕ್ರಂ ಬಿತ್ತನೆ ಮಾಡಲಾಗಿದ್ದು, ಬೆಳೆ ಹೂ ವಾಡುವ ಹಂತದಲ್ಲಿದ್ದು, ಸ್ಥಳೀಯ ತಳಿಗಳಿಗೆ ಹೋಲಿಕೆ ಮಾಡಿದರೆ ಬೆಳೆಯು ಎತ್ತರವಾಗಿ ಬೆಳೆದಿದೆ. ಈ ಸಂದರ್ಭದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರವಾದ 19:19:19 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಹಾಗೂ ಕಾಯಿ ಕೊರಕದ ಕೀಟ ನಿರ್ವಹಣೆಗಾಗಿ ಇಮಾಮೆಕ್ಕಿನ್ ಬೆಜೊಯೇಟ್ 0.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಲ್ ಮಾಡಬೇಕು ಎಂದು ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಕ್ಷೇತ್ರ ಭೇಟಿ ಸಂದರ್ಭದಲ್ಲಿ ರೈತರಿಗೆ ತಿಳಿಸಿದರು.
ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ತಜ್ಞ ರಘುರಾಜ್, ರುದ್ರೇಶ್, ವಿಶ್ವನಾಥ್ ಇತರರು ಭಾಗವಹಿಸಿದ್ದರು.