ಕನ್ನಡ ಮನಸುಗಳ ಏಕೀಕರಣವಾಗಬೇಕು

ಕನ್ನಡ ಮನಸುಗಳ ಏಕೀಕರಣವಾಗಬೇಕು

ಮಿಟ್ಲಕಟ್ಟೆಯ ವಿಬಿಪಿ ಫೌಂಡೇಶನ್ನಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಘವೇಂದ್ರ ನಾಯರಿ

ದಾವಣಗೆರೆ, ಡಿ.22- ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡ ಮನಸ್ಸುಗಳ ಏಕೀಕರಣ ಮೊದಲು ಆಗಬೇಕು. ನಾಡಿ‌ನಲ್ಲಿ ಇರುವ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಸಂಗೀತ, ಸಾಹಿತ್ಯ, ಕಲೆ, ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯಕ್ಕೆ ಸಿಕ್ಕ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ದ್ಯೋತಕವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು. 

ಇಲ್ಲಿಗೆ ಸಮೀಪದ ಮಿಟ್ಲಕಟ್ಟೆ ಗ್ರಾಮದಲ್ಲಿ ವಿಬಿಪಿ ಫೌಂಡೇಶನ್ ವತಿಯಿಂದ ಈಚೆಗೆ ಆಯೋಜಿಸಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕನ್ನಡ ನಾಡು, ನುಡಿಗೆ ಮಹತ್ವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಕನ್ನಡ ನಾಡಿನಲ್ಲಿ‌ ನೆಲೆಸಿರುವ ಪ್ರತಿಯೊಬ್ಬರ ಮನೆ ಹಬ್ಬವಾಗಬೇಕು ಹಾಗೂ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. 

ಹೃದಯದ ಭಾಷೆ ಎನ್ನಿಸಿಕೊಂಡ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಯಾವುದೇ ಮತ ಪಂಥದ ಭಾಷೆಯಲ್ಲ. ಅದು ನಮ್ಮ ಮಣ್ಣಿನ ಭಾಷೆ. ಎಲ್ಲಾ ಹಂತದಲ್ಲಿ ಕನ್ನಡ ಭಾಷೆ ಬಳಕೆಮಾಡುವುದರ ಮೂಲಕ ಕನ್ನಡ ನಾಡುನುಡಿಯ ವೈಭವೀಕರಣ ಕನ್ನಡಿಗರಾದ ನಾವೇ ಮಾಡಬೇಕು. ಕನ್ನಡ ನಾಡು, ನುಡಿ, ಸಾಹಿತ್ಯದ ಹಿರಿಮೆ ಗರಿಮೆಯನ್ನು ಯುವ ಜನತೆಗೆ ತಲುಪಿಸಬೇಕು ಎಂದು ನಾಯರಿ ಅಭಿಪ್ರಾಯಪಟ್ಟರು.

ಅತಿಥಿಯಾಗಿ ಆಗಮಿಸಿದ್ದ ಆಶಾಕಿರಣ ಟ್ರಸ್ಟ್   ಸಂಸ್ಥಾಪಕ ಪೋಪತ್‌ಲಾಲ್ ಜೈನ್ ಮಾತನಾಡಿ, ಕನ್ನಡ ನಾಡಿನ ಬದುಕುಕಟ್ಟಿಕೊಂಡವರೆಲ್ಲರೂ ಕನ್ನಡ ನಾಡು ನುಡಿಯ ಸೇವೆಯನ್ನು ನಿಸ್ವಾರ್ಥತೆ ಯಿಂದ ಮಾಡಬೇಕು ಎಂದರು. ಇದೇ ಸಂದರ್ಭ ದಲ್ಲಿ ವಿಬಿಪಿ ಫೌಂಡೇಶನ್‌ನ ವಿದ್ಯಾರ್ಥಿಗಳಿಗೆ ಕನ್ನಡ ಶಾಲು ಹಾಗೂ ಸಿಹಿ ವಿತರಿಸಿದರು.

ವಿಬಿಪಿ ಫೌಂಡೇಶನ್‌ ಮುಖ್ಯಸ್ಥ ಶಿವಕುಮಾರ್ ಮೇಗಳಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡವು ಸಮೃದ್ಧವಾದ ಭಾಷೆ, ಸುಲಭವಾಗಿ ಅರ್ಥವಾಗುತ್ತದೆ. ಉದ್ಯೋಗ, ಉದ್ಯಮ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಬಂದು ನಮ್ಮ ನೆಲದಲ್ಲಿ ಬದುಕುತ್ತಿರುವ ಎಲ್ಲ ರಿಗೂ ಅದರಲ್ಲೂ ಬೇರೆ ಭಾಷೆಯವರಿಗೆ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕು. ಇಲ್ಲಿನ ಸೌಲಭ್ಯಗಳನ್ನೆಲ್ಲಾ ಬಳಸಿಕೊಳ್ಳುತ್ತಿರುವ ನೀವು ನಮ್ಮ ಭಾಷೆಯನ್ನು ಕಲಿತುಕೊಳ್ಳಿ ಎಂದು ಹೇಳು ವಂತಹ ದಕ್ಷತೆ ನಮ್ಮಲ್ಲೂ ಬರಬೇಕು ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಹಿತೈಷಿಗಳಾದ ಹೋಟೆಲ್ ಉದ್ಯಮಿ‌ ಸುರೇಶ್, ನಗೆಕೂಟದ ರಾಮಚಂದ್ರ ಶೆಟ್ಟರ್, ಗಣಪತಿ  ಕಾಗಲ್‌ಕರ್, ವಿಬಿಪಿ ಫೌಂಡೇಶನ್‌ ಕಾರ್ಯದರ್ಶಿ ಪ್ರಭು ಎ ಎ.ಎನ್., ಚೌಡಪ್ಪ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!