ಜಿಲ್ಲಾ ಆಸ್ಪತ್ರೆ ಶಿಥಿಲ ಕಟ್ಟಡ ವೀಕ್ಷಿಸಿದ ಶಾಸಕ ಕೆ.ಎಸ್. ಬಸವಂತಪ್ಪ

ಜಿಲ್ಲಾ ಆಸ್ಪತ್ರೆ ಶಿಥಿಲ ಕಟ್ಟಡ ವೀಕ್ಷಿಸಿದ ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ, ಡಿ. 22 – ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯಲ್ಲಿ ಈಚೆಗೆ ಮೇಲ್ಚಾವಣಿಯ ಪದರು ಕಳಚಿ ಬಿದ್ದು ಮೂವರು ಗಾಯಗೊಂಡ ಹಿನ್ನೆಲೆ ಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಡಿ. 17 ರಂದು ಆಸ್ಪತ್ರೆಯ ಮೇಲ್ಚಾವಣಿಯ ಪದರು ಕಳಚಿ ಬಿದ್ದು, ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ಕಾವೇರಿ, ಪ್ರೇಮಾ ಹಾಗೂ ಎರಡೂವರೆ ವರ್ಷದ ಮಗು ಗಾಯಗೊಂಡಿದ್ದರು. ಅಲ್ಲದೇ ಕಳೆದ ಮಾರ್ಚ್ ತಿಂಗಳಲ್ಲಿ ಇದೇ ರೀತಿ ಪದರು ಕಳಚಿ ಬಿದ್ದು ವಾರ್ಡ್ ನಂಬರ್ 72 ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಎಂಬ ರೋಗಿ ಗಾಯಗೊಂಡಿದ್ದರು.

ಜಿಲ್ಲಾ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡು ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಜೀವ ಭಯದಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಶಾಸಕ ಬಸವಂತಪ್ಪ ಭೇಟಿ ನೀಡಿ ಆಸ್ಪತ್ರೆಯ ಕಟ್ಟಡವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈಚೆಗೆ ದಾವಣಗೆರೆಗೆ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ತಾವು ಹೊಸ ಕಟ್ಟಡ ನಿರ್ಮಿಸುವಂತೆ ಮನವಿ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ  ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ನಾಗೇಂದ್ರಪ್ಪ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಆಸ್ಪತ್ರೆಯ ಕಟ್ಟಡ ಹಾಗೂ ವಾರ್ಡ್‌ಗಳಲ್ಲಿ ಎಲ್ಲೆಲ್ಲಿ ಪದರುಗಳು ಕಳಚಿ ಬೀಳುವಂತಹ ಸ್ಥಿತಿಯಲ್ಲಿವೆ. ಅವುಗಳನ್ನು ಗುರುತಿಸಿ ತಾತ್ಕಾಲಿಕವಾಗಿ ತೆರವುಗೊಳಿಸಲು ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚನೆ ನೀಡಿದರು. ಹೊಸ ನಿರ್ಮಾಣಕ್ಕೆ ತಾವು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು. ಈ ವೇಳೆ ಕೆಲವು ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!