ದಾವಣಗೆರೆ, ಡಿ.22- ಬಾಬಾ ಸಾಹೇಬ್ ಅಂಬೇಡ್ಕರ್ವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬೇಕು ಮತ್ತು ಅವರು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿ, ಡಿ.23ರ ಬೆಳಗ್ಗೆ 10.30ಕ್ಕೆ ಸಂವಿಧಾನ ರಕ್ಷಣಾ ವೇದಿಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದೆ.
ಅಂದು ಅಂಬೇಡ್ಕರ್ ವೃತ್ತದಲ್ಲಿನ ಸಂವಿಧಾನ ಶಿಲ್ಪಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ, ಪ್ರತಿಭಟನಾ ಮೆರವಣಿಗೆಯು ಜಯದೇವ ವೃತ್ತ ಹಾಗೂ ಗಾಂಧಿ ವೃತ್ತದ ಮುಖೇನ ಮಹಾನಗರ ಪಾಲಿಕೆ ತಲುಪಲಿದೆ, ಅಲ್ಲಿಂದ ಪುನಃ ಅಂಬೇಡ್ಕರ್ ವೃತ್ತಕ್ಕೆ ಮರಳಿ, ಸಭಾ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ವೇದಿಕೆಯ ಸಂಚಾಲಕ ರವಿ ನಾರಾಯಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಮಿತ್-ಷಾ ನೀಡಿದ ಅಂಬೇಡ್ಕರ್ ಕುರಿತಾದ ಹೇಳಿಕೆ, ಅವರ ಅಂತರಾಳದಲ್ಲಿನ ಅಂಬೇಡ್ಕರ್ ಮೇಲಿನ ದ್ವೇಷ ಭಾವನೆಯನ್ನು ಎತ್ತಿ ತೋರಿಸುತ್ತಿದೆ ಎಂದು ದೂರಿದರು.
ಅಂಬೇಡ್ಕರ್ ಅವರನ್ನು ಶೋಷಿತ ಸಮುದಾಯಗಳು ದೇವರ ರೀತಿಯಲ್ಲಿ ಪೂಜಿಸುತ್ತಿದ್ದು, ಗೃಹ ಸಚಿವರ ಹೇಳಿಕೆಯಿಂದ ಈ ಸಮುದಾಯಗಳ ಪೂಜ್ಯ ಭಾವನೆಗೆ ಧಕ್ಕೆಯಾಗಿದೆ. ಹಾಗಾಗಿ ಅಮಿತ್ ಷಾ ಅವರನ್ನು, ಕೇಂದ್ರ ಸಚಿವ ಸಂಪುಟದಿಂದ ಪದಚ್ಯುತಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ವೇದಿಕೆಯ ಸಂಚಾಲಕರಾದ ಎನ್. ರುದ್ರಮುನಿ, ಬಿ.ಎಂ. ಹನುಮಂತಪ್ಪ, ಅನಿಸ್ ಪಾಷಾ, ಶೇಖರಪ್ಪ, ಅಬ್ದುಲ್, ನಾಗಭೂಷಣ್, ಬಿ. ವೀರಣ್ಣ, ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.