ಕ್ಯೂ-ಸ್ಪೈಡರ್ಸ್ ಸಿಇಓ ಗಿರೀಶ್ ರಾಮಣ್ಣ ಜೊತೆ ಸಂಸದೆ ಡಾ.ಪ್ರಭಾ ಚರ್ಚೆ
ದಾವಣಗೆರೆ, ಡಿ.22- ಜಿಲ್ಲೆಯ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿಯೇ ಉದ್ಯೋಗ ಆಧಾರಿತ ತರಬೇತಿ ಕೊಡಿಸುವ ಅವಶ್ಯಕತೆ ಮನಗಂಡ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಈ ಕುರಿತು ಬೆಂಗಳೂರಿನ ಕ್ಯೂ -ಸ್ಪೈಡರ್ಸ್ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್‌ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಕಂಪನಿಗೆ ಭೇಟಿ ನೀಡಿ, ಕ್ಯೂ-ಸ್ಪೈಡರ್ಸ್ ಸಂಸ್ಥಾಪಕ ಹಾಗೂ ಸಿಇಓ ಗಿರೀಶ್ ರಾಮಣ್ಣನವರೊಂದಿಗೆ ಚರ್ಚಿಸಿದರು.
ಜಿಲ್ಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಾಧಾರಿತ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳುತ್ತಿದ್ದು, ವಿದ್ಯಾರ್ಥಿಗಳ ತರಬೇತಿ ಶುಲ್ಕ, ಊಟ ಮತ್ತು ವಸತಿಗಳಿಗೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಇದನ್ನು ಮನಗಂಡ ಸಂಸದರು, ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರೊಂದಿಗೆ ಚರ್ಚಿಸಿ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆಯಲ್ಲಿ ತರಬೇತಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದರು.
ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬೇಕಾಗುವ ತರಬೇತಿ ಕೇಂದ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಬದ್ಧರಾಗಿ ಕ್ಯೂ -ಸ್ಪೈಡರ್ಸ್‌ನ ಸಿಇಓ ಗಿರೀಶ್ ರವರೊಂದಿಗೆ ಮಾತುಕತೆ ನಡೆಸಿದರು.
ಕಂಪನಿಯ ಸಾಮಾಜಿಕ ಜವಾಬ್ದಾರಿ ಹಾಗೂ ಸಿಎಸ್ ಆರ್ ಯೋಜನೆಯಡಿಯಲ್ಲಿ ಉಚಿತವಾಗಿ ದಾವಣಗೆರೆಯಲ್ಲಿಯೇ ತರಬೇತಿ ಕೊಡಲು ಗಿರೀಶ್ ಸಮ್ಮತಿಸಿದರು.
ದಾವಣಗೆರೆ ವಿ.ವಿ. ಕುಲಪತಿ ಡಾ. ಬಿ.ಡಿ.ಕುಂಬಾರ್‌ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು, ಶೀಘ್ರದಲ್ಲೇ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ತರಬೇತಿಯನ್ನು ಪ್ರಾರಂಭಿಸಲು ಸೂಚಿಸಿದರು.
ದಾವಣಗೆರೆಯಲ್ಲಿ ಸಾಪ್ಟವೇರ್ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಆಫೀಸ್‌ಗಳು ಕಾರ್ಯನಿರ್ವಹಿಸುವ ಸಾಧ್ಯತೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಮಹಿಳೆಯರಿಗೆ ಗಾರ್ಮೆಂಟ್ಸ್ ಮತ್ತು ಇತರೆ ಉದ್ಯಮಗಳ ಬಗ್ಗೆಯೂ ಸಹ ಚರ್ಚಿಸಲಾಯಿತು.
ಈ ವೇಳೆ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯರಾದ ಡಾ.ಪ್ರಶಾಂತ್ ಎನ್.ಸಿ., ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಟೇಲ್, ಎಲ್. ಸತೀಶ್ ಕುಮಾರ್, ಸಮರ್ಥ್ ಶಾಮನೂರು ಉಪಸ್ಥಿತರಿದ್ದರು.